ಚಾಮರಾಜನಗರ: ಕೊಳ್ಳೇಗಾಲದ ಒಂದೇ ಕುಟುಂಬದ ನಾಲ್ವರನ್ನು ಅಪರೂಪದ ಕಾಯಿಲೆ ಹಿಂಡಿ ಹಿಪ್ಪೆ ಮಾಡಿದೆ. ಒಬ್ಬರು ಕಾಲುಗಳ ಶಕ್ತಿ ಕಳೆದುಕೊಂಡಿದ್ದಾರೆ. ಉಳಿದ ಮೂವರು ಎದ್ದರೆ ಕೂರಲಾಗದೆ, ಕೂತರೆ ಎದ್ದೇಳುವುದಕ್ಕೂ ಆಗುತ್ತಿಲ್ಲ.
ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿ ತಾಸಿಮ್ ತಾಜ್(43 ವರ್ಷ), ತಮ್ಮಂದಿರಾದ ಸಯ್ಯದ್ ಇದಾಯತ್(33), ಸಯ್ಯದ್ ಇಮ್ರಾನ್(32), ಸಯ್ಯದ್ ನೂರ್‌ಮಹಮದ್‌ಗೆ(30) ಅಪರೂಪದ ಕಾಯಿಲೆ ಮಸ್ಕೂೃಲಾರ್ ಡಿಸ್ಟ್ರೋಫಿ ಅಥವಾ ಸ್ನಾಯು ಕ್ಷಯರೋಗ ಬಾಧಿಸುತ್ತಿದೆ.
ವೈದ್ಯಕೀಯ ಮಾಹಿತಿ ಪ್ರಕಾರ ವಂಶವಾಹಿಯಿಂದ ಈ ರೋಗ ಬರುತ್ತದೆ. ಒಬ್ಬರಿಗೆ ಮತ್ತೊಬ್ಬರಿಗೆ ಹರಡುವುದಿಲ್ಲ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಇದರ ಪರಿಣಾಮವನ್ನು ಕಡಿಮೆ ಮಾಡಲು ಫಿಜಿಯೋಥೆರಪಿ, ಆಕ್ಯುಪ್ರೆಶರ್ ಥೆರಪಿಗಳು ಲಭ್ಯವಿವೆ. ಇದು ಸ್ನಾಯುವನ್ನು ದುರ್ಬಲಗೊಳಿಸುವ ರೋಗವಾಗಿದ್ದು, ಸ್ನಾಯುಗಳ ಶಕ್ತಿ ಕಳೆದುಕೊಳ್ಳುತ್ತಾರೆ. ಮಾಂಸಖಂಡ ಕ್ಷೀಣಿಸುತ್ತದೆ. ಕೊಳ್ಳೇಗಾಲದಲ್ಲಿ ಈ ಕಾಯಿಲೆಯಿಂದ ನಾಲ್ವರು ರೋಗಿಗಳು ಸಮಸ್ಯೆ ಅನುಭವಿಸುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದಿ.ಸಯ್ಯದ್ ರೆಹಮತ್ ಉಲ್ಲಾ ಮತ್ತು ರಫಿಯಾ ದಂಪತಿಗೆ ಒಟ್ಟು 10 ಮಕ್ಕಳು. 6 ಗಂಡು, 4 ಹೆಣ್ಣು ಮಕ್ಕಳು. ಇವರಲ್ಲಿ ಒಬ್ಬ ಹೆಣ್ಣು ಮಗಳು, ಮೂವರು ಗಂಡು ಮಕ್ಕಳಿಗೆ ಈ ರೋಗ ಕಾಣಿಸಿಕೊಂಡಿತು. ಇದ್ದಕ್ಕಿದ್ದಂತೆಯೇ ಕೈ-ಕಾಲುಗಳು ಶಕ್ತಿ ಕಳೆದುಕೊಳ್ಳುತ್ತಿರುವುದರ ಅರಿವಾಗಿ ವೈದ್ಯರಿಗೆ ತೋರಿಸಿದಾಗ ರೋಗ ಬಂದಿರುವುದು ಗೊತ್ತಾಗಿದೆ.
ಪ್ರಸ್ತುತ ನಾಲ್ವರ ಆರೋಗ್ಯ ಸ್ಥಿತಿ ಭಿನ್ನವಾಗಿದೆ. ಅಕ್ಕ ತಾಸಿಮ್‌ತಾಜ್‌ಗೆ ನಡೆಯುವುದು, ಕೂರುವುದು, ಮೇಲಕ್ಕೆ ಏಳುವುದು ಕಷ್ಟ. ತಮ್ಮಂದಿರಾದ ಸೈಯದ್ ಇದಾಯತ್ 20 ವರ್ಷಗಳ ಹಿಂದೆ ಗಂಧದಕಡ್ಡಿ ವ್ಯಾಪಾರಿಯಾಗಿದ್ದರು. ಇವರಿಗೆ ಮದುವೆಯಾಗಿದ್ದು, ಮಕ್ಕಳಿಲ್ಲ. ಈ ರೋಗ ಬಂದ ಬಳಿಕ ಎರಡೂ ಕಾಲುಗಳ ಶಕ್ತಿ ಕಳೆದುಕೊಂಡು ವ್ಹೀಲ್‌ಚೇರ್ ಮೇಲೆ ಕುಳಿತಿದ್ದಾರೆ. ಕೈಗಳ ಸ್ನಾಯುಗಳು ದೌರ್ಬಲ್ಯಗೊಂಡಿವೆ. ಊಟ ಮಾಡಲು ಕೈ ಎತ್ತುವುದಕ್ಕೂ ಕಷ್ಟಪಡುತ್ತಾರೆ.
ಸಯ್ಯದ್ ಇಮ್ರಾನ್ ಸಮತಟ್ಟಾದ ಕಡೆಗಳಲ್ಲಿ ನಡೆದಾಡಬಹುದಷ್ಟೆ. ಮೆಟ್ಟಿಲು ಹತ್ತುವುದು, ಕೂರುವುದು, ಮೇಲಕ್ಕೆ ಎದ್ದೇಳುವುದಕ್ಕೆ ಕಷ್ಟಪಡಬೇಕು. ಈ ಪರಿಸ್ಥಿತಿಯಲ್ಲಿ ಇವರಿಗೆ ಇಬ್ಬರು ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆ ಇದೆ.
ಮತ್ತೊಬ್ಬ ರೋಗಿ ಸಯ್ಯದ್ ನೂರ್‌ಮಹಮದ್ ಮೊಬೈಲ್ ರಿಪೇರಿ ಮಾಡುತ್ತಿದ್ದರು. ಜಿಮ್‌ಗೆ ಹೋಗಿ ಕಸರತ್ತು ಮಾಡಿ ಆರೋಗ್ಯ ಕಾಪಾಡಿಕೊಂಡಿದ್ದರು. ಈ ಯುವಕನನ್ನು ಹುಡುಗಿಯೊಬ್ಬಳು ಪ್ರೇಮ ವಿವಾಹವಾದಳು. ಒಂದು ಹೆಣ್ಣು ಮಗು ಸಹ ಇದೆ. ಎಲ್ಲವೂ ಚೆನ್ನಾಗಿದ್ದಾಗ ಇದ್ದಕ್ಕಿದ್ದಂತೆಯೇ ನೂರ್‌ಮಹಮದ್‌ಗೂ ಸ್ನಾಯು ಕ್ಷಯರೋಗ ಕಾಣಿಸಿಕೊಂಡಿತು. ಈಗ ತನ್ನ ಎರಡೂ ಕಾಲುಗಳ ಶಕ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಬ್ಬರ ಸಹಾಯವಿಲ್ಲದೆ ಕೆಳಕ್ಕೆ ಕೂರಲಾಗದು, ಮೇಲಕ್ಕೆ ಏಳಲಾಗದು, ನಡೆಯಲೂ ಆಗದು. ಕಾಲುಗಳ ಶಕ್ತಿ ಕಳೆದುಕೊಂಡು ಕುಳಿತಿರುವ ತನ್ನ ಅಣ್ಣ ಸಯ್ಯದ್ ಇದಾಯತ್ ನೋಡಿ ತನ್ನ ಭವಿಷ್ಯವನ್ನು ನೂರ್‌ಮಹಮದ್ ಅರಗಿಸಿಕೊಳ್ಳಬೇಕಾಗಿದೆ. ಚಿಕ್ಕದೊಂದು ಚಿಲ್ಲರೆ ಅಂಗಡಿ ಈ ಮೂವರ ಜೀವನಕ್ಕೆ ಆಧಾರವಾಗಿದೆ. ಜೀವನ ನಿರ್ವಹಣೆ, ಚಿಕಿತ್ಸೆಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಆಸ್ಪತ್ರೆ, ಮಸೀದಿ, ಮಂದಿರ…
ಅಕ್ಕ ಮತ್ತು ಮೂವರು ತಮ್ಮಂದಿರು ಮೈಸೂರು, ಬೆಂಗಳೂರಿನ ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸೆ ಪಡೆದ್ದಾರೆ. ಮಸೀದಿ, ಮಂದಿರಗಳಲ್ಲಿ ಪೂಜೆ ಮಾಡಿದರು. ತಾಸಿಮ್‌ತಾಜ್ ಪತಿ ಸೈಯದ್ ಸಲೀಂ ಪತ್ನಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡಿಯೂ ಆರೋಗ್ಯದಲ್ಲಿ ಸುಧಾರಣೆ ಕಂಡಿಲ್ಲ. ಸಯ್ಯದ್ ಇದಾಯತ್, ಸಯ್ಯದ್ ಇಮ್ರಾನ್, ಸಯ್ಯದ್ ನೂರ್‌ಮಹಮದ್ ಅವರನ್ನು ಮನೆಯವರು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ.
———
ಕೋಟ್…
ಮಸ್ಕೂೃಲಾರ್ ಡಿಸ್ಟ್ರೋಫಿಯಿಂದ ನನ್ನ ಕಾಲುಗಳು ಶಕ್ತಿ ಕಳೆದುಕೊಂಡಿವೆ. ನನ್ನ ಸಹೋದರರ ಆರೋಗ್ಯವೂ ಕ್ಷೀಣಿಸಿದೆ. ಚಿಕಿತ್ಸೆ ಮತ್ತು ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದೇವೆ. ಕುಟುಂಬದ ನಿರ್ವಹಣೆಗಾಗಿ ಸರ್ಕಾರದಿಂದ ನೆರವು ನೀಡಬೇಕೆಂದು ಕೋರುತ್ತೇನೆ.
ಸೈಯದ್ ಇದಾಯತ್, ಮಸ್ಕೂೃಲಾರ್ ಡಿಸ್ಟ್ರೋಫಿಯಿಂದ ಬಳಲುತ್ತಿರುವವರು
——–
ಮಸ್ಕೂೃಲಾರ್ ಡಿಸ್ಟ್ರೋಫಿಯಿಂದ ಬಳಲುತ್ತಿರುವ ಒಂದೇ ಕುಟುಂಬದ ನಾಲ್ವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತೇನೆ. ಅಗತ್ಯ ಸಹಕಾರ ನೀಡುತ್ತೇನೆ.
ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ, ಚಾಮರಾಜನಗರ
———
ಮಸ್ಕೂೃಲಾರ್ ಡಿಸ್ಟ್ರೋಫಿ ಬಂದಿರುವ ರೋಗಿಗಳು ನಮ್ಮ ಆಸ್ಪತ್ರೆಗೆ ಬಂದರೆ ಬಿಪಿಎಲ್ ಕಾರ್ಡ್ ಬಳಸಿಕೊಂಡು ತಪಾಸಣೆ, ಪರೀಕ್ಷೆ ನಡೆಸಲಾಗುವುದು.
ಡಾ.ಡಿ.ಸಿ.ಜನಾರ್ದನ್, ನ್ಯೂರಾಲಜಿಸ್ಟ್
ಪಿಎಂಎಸ್‌ಎಸ್‌ವೈ ಆಸ್ಪತ್ರೆ ಬೆಂಗಳೂರು