ಹುತಾತ್ಮ ವೀರ ಅರ್ಜುನನಿಗೆ ಕಂಬನಿಯ ವಿದಾಯ ಕಣ್ಣೀರು ತರಿಸಿದ ಮಾವುತರ ಆಕ್ರಂದನ: ಸೂಕ್ತ ತನಿಖೆಗೆ ಸ್ಥಳೀಯರ ಪ್ರತಿಭಟನೆ: ಲಘು ಲಾಠಿ ಪ್ರಹಾರ: ಮಣ್ಣಲ್ಲಿ ಮಣ್ಣಾದ ಕ್ಯಾಪ್ಟನ್

ಹಾಸನ: ಸೆರೆ ಕಾರ್ಯಾಚರಣೆ ವೇಳೆ ಕಾಡಾನೆಯೊಂದಿಗೆ ಕಾದಾಡಿ ವೀರ
ಮರಣ ಹೊಂದಿದ ಕ್ಯಾಪ್ಟನ್ಅರ್ಜುನನ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ನೆರೆದಿದ್ದ ಸಾವಿರಾರು ಮಂದಿ ಕಣ್ಣೀರು ಮಿಡಿಯುವ ಮೂಲಕ ಭಾವಪೂರ್ಣ ವಿದಾಯ ಹೇಳಿದರು. ಅಲ್ಲಿಗೆ ಹಂಟರ್ ಸ್ಪೆಷಲಿಸ್ಟ್, ಮೈಸೂರು ದಸರಾದಲ್ಲಿ ೮
ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ, ೩.೩೦ ರ ಸುಮಾರಿಗೆ ಸಕಲೇಶಪುರ ತಾಲೂಕು ಯಸಳೂರು ಹೋಬಳಿ, ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನೆಡುತೋಪಿನ ಮಣ್ಣಲ್ಲಿ ಮಣ್ಣಾಗುವ ಮೂಲಕ ಶಾಶ್ವತವಾಗಿ ನೆನಪಿನ ಮನೆಗೆ ಜಾರಿದ.
ಅರ್ಜುನ ಇನ್ನಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ನಿನ್ನೆ ಅದೆಷ್ಟೋ
ಮಂದಿ ಗಳಗಳನೆ ಅತ್ತಿದ್ದರು. ಇಂದು ತಂಡೋಪ ತಂಡವಾಗಿ ಬಂದು ನಿಶ್ಚಲವಾಗಿ ಮಲಗಿದ್ದ ವೀರ ಸೇನಾನಿಯ ಕಳೇಬರ ಕಂಡು ದುಃಖ ತಪ್ತರಾದರು.
ಅರ್ಜುನನ ಅಂತಿಮ ದರ್ಶನ ಪಡೆದು ಕೈ ಮುಗಿದು ಹೋಗಿ ಬಾ ದೊರೆ ಎಂದು ಕೈ ಮುಗಿದರು. ಅದರಲ್ಲೂ ಅರ್ಜುನನೊಂದಿಗೆ ಕೂಡಿ ಬೆಳೆದಿದ್ದ ಮಾವುತರಂತೂ ಅಪ್ಪ ದೊರೆಯೇ ನಮ್ಮ ಬಿಟ್ಟು ಹೋಗಬೇಡ, ಎದ್ದು ಬಾ ಮೈಸೂರಿಗೆ ಹೋಗೋಣ ಎಂದು ಅರ್ಜುನನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ಅದರಲ್ಲೂ ಅರ್ಜುನನ ಮಾವುತ ವಿನು, ಅಂತಿಮ ದರ್ಶನಕ್ಕೆ ಕರೆತಂದ ವೇಳೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ. ಅರ್ಜುನನ ಸೊಂಡಿಲು ತಬ್ಬಿಕೊಂಡು ಒದ್ದಾಡಿದ. ಅರ್ಜುನನ ಜೊತೆ ಅವಿನಾಭಾವ ಸಂಬAಧ ಹೊಂದಿದ್ದ ವಿನು, ಗೆಳೆಯನ ಸಾವು ಅರಗಿಸಿಕೊಳ್ಳಲಾಗದೆ ಅತ್ತ. ನನ್ನ ಹಾಗೂ ಕುಟುಂಬದವರನ್ನೂ ಅರ್ಜುನನೊಂದಿಗೆ ಮಣ್ಣು ಮಾಡಿ ಎಂದು ಗೋಳಾಡಿದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವವಾಗಿಸಿತು. ಮಾವುತರ ರೋದನಕ್ಕೆ ಇಡೀ ಜನಸ್ತೋಮ ಮೌನವಾಯಿತು. ಅರ್ಜುನನ ಕಳೆದುಕೊಂಡು ಅನಾಥ ಭಾವ ಅನೇಕರಲ್ಲಿ ಮನೆ ಮಾಡಿತ್ತು.


ಅರಮನೆ ಪುರೋಹಿತರಿಂದ ವಿಧಿ ವಿಧಾನ:
ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಆಗಮಿಸಿದ ಮೈಸೂರು ಅರಮನೆ
ಪುರೋಹಿತರಾದ ಪ್ರಹ್ಲಾದ್ ಮತ್ತವರ ತಂಡ ವಿಧಿವಿಧಾನ ನೆರವೇರಿಸಿತು. ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜೀತಾ, ಡಿಎಫ್‌ಒ ಮೋಹನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಿಸಿದರು.
ಸ್ಥಳೀಯರ ಆಕ್ರೋಶ-ಪ್ರತಿಭಟನೆ:
ಇನ್ನು ಸಾಕಾನೆ ಅರ್ಜುನನ ದುರಂತ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿರುವ ಸ್ಥಳೀಯರು, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದ ನಡೆದಿದೆ. ಕಾಲಿಗೆ ಗುಂಡೇಟು ಬಿದ್ದು ಅರ್ಜುನ ನೆಲಕ್ಕುಳಿದಿದೆ. ಆಗ ಕಾಡಾನೆ ಕೋರೆಯಿಂದ ತಿವಿದು ಸಾಯಿಸಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಯಡೇಹಳ್ಳಿ ಮಂಜುನಾಥ್ ಮೊದಲಾದವರು ಪ್ರತಿಭಟನೆ ನಡೆಸಿದರು. ಡಿಸಿ, ಎಸ್ಪಿ ಎಷ್ಟೇ ಮನವೊಲಿಸಿದರೂ ಸುಮ್ಮನಾಗದೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ವಯಸ್ಸಾದ ಕಾಡಾನೆಯನ್ನು ಕಾರ್ಯಾಚರಣೆಗೆ ಬಳಸಿದ್ದು ತಪ್ಪು ಎಂದು ವಾದಿಸಿದರು.
ಅಷ್ಟೇ ಅಲ್ಲ, ಅರ್ಜುನನ ಅಂತಿಮ ಸಂಸ್ಕಾರಕ್ಕೆ ಗುಂಡಿ ತೆಗೆಯಲು ಜೆಸಿಬಿಗಳಿಗೆ ಅವಕಾಶ ಮಾಡಿಕೊಡದೆ ಗಲಾಟೆ ಮಾಡಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು. ಲಾಠಿ ಬೀಸುತ್ತಲೇ ಜನ ದಿಕ್ಕಾಪಾಲಾಗಿ ಓಡಿದರು.
ಒಂದೆಡೆ ಪ್ರತಿಭಟನೆ ಮತ್ತೊಂದೆಡೆ ಅರ್ಜುನನನ್ನು ನೋಡಲು ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸ್ವತಃ ಎಸ್ಪಿ ಅವರೇ ಮುಂದೆ ನಿಂತು ಬಿಗುವು ಪಡೆದಿದ್ದ ವಾತಾವರಣವನ್ನು ತಿಳಿಗೊಳಿಸಿದರು.


ಸರ್ಕಾರಿ ಗೌರವ ಸಲ್ಲಿಕೆ:
ಅರ್ಜುನನ ಅಂತ್ಯಕ್ರಿಯೆಗೂ ಮುನ್ನ, ಪೊಲೀಸರು ಮೂರು ಸುತ್ತು ಕುಶಾಲ
ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಪೊಲೀಸ್ ಸಿಬ್ಬಂದಿಯಿAದ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಎರಡು ಜೆಸಿಬಿ ಸಹಾಯದಿಂದ ಸುಮಾರು ೧೫ ಅಡಿ ಆಳದ ಗುಂಡಿ ತೆಗೆದು ಸಮಾಧಿಗೆ ಉಪ್ಪು, ಸುಣ್ಣ, ಬ್ಲೀಚಿಂಗ್ ಪೌಡರ್ ಸುರಿಯಲಾಯಿತು. ನಂತರ ಅರ್ಜುನ ಕಳೇಬರವನ್ನು ಜೆಸಿಬಿ ನೆರವಿನೊಂದಿಗೆ ಗುಂಡಿಗೆ ಇಳಿಸಿ ಮಣ್ಣು ಮಾಡಲಾಯಿತು. ಮಾವು ವಿನು ಸೇರಿ ನೆರೆದಿದ್ದವರು ಕಣ್ಣೀರಿಡುತ್ತಲೇ ನೋವಿನ ವಿದಾಯ ಹೇಳಿದರು. ಇದಕ್ಕೂ ಮುನ್ನ ಅರೆಮನೆ ಪುರೋಹಿತರು ಸಮಾಧಿಗೆ ಪೂಜೆ ಸಲ್ಲಿಸಿದರು.
ಅಂತ್ಯಕ್ರಿಯೆಗೂ ಮುನ್ನ ಅರಣ್ಯಾಧಿಕಾರಿಗಳು ವೈದ್ಯರ ನೆರವಿನೊಂದಿಗೆ ಎರಡೂ ದಂತವನ್ನು ತೆಗೆದುಕೊಂಡರು. ನಂತರ ಹುತಾತ್ಮ ಅರ್ಜುನನಿಗೆ ಅಂತಿಮ ವಿದಾಯ ಹೇಳಲಾಯಿತು. ಸಹಸ್ರಾರು ಜನರ ಅಶ್ರು ತರ್ಪಣದ ನಡುವೆ ಅರ್ಜುನನ ಅಂತ್ಯಕ್ರಿಯೆ ನೆರವೇರಿತು.

ಅರ್ಜುನ ಸಾವಿನ ಸುತ್ತ ಅನುಮಾನ:

ಈ ನಡುವೆ ಅರ್ಜುನನ ಸಾವಿನ ಸುತ್ತ ಅನುಮಾನ ಮೂಡಿದೆ. ಗುರಿ ತಪ್ಪಿ ಬಿದ್ದ ಗುಂಡೇಟಿನಿAದ ಬಲ ಕಳೆದುಕೊಂಡು ಹೋರಾಟಲಾಗದೆ ಅರ್ಜುನ ಜೀವ ತೆತ್ತ ಎಂಬ ಗುಸು ಗುಸು ಹರಿದಾಡುತ್ತಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆದ ಯಡವಟ್ಟೇ ಅರ್ಜುನ ಸಾಯಲು ಕಾರಣ ಎನ್ನಲಾಗುತ್ತಿದೆ. ಸಲಗ ದಾಳಿ ಮಾಡಿದಾಗ ಅರಣ್ಯಾಧಿಕಾರಿಗಳು, ವೈದ್ಯರು ಗಾಳಿಯಲ್ಲಿ ಗುಂಡು ಹಾರಿಸಿದ ಗುಂಡು,
ಅರ್ಜುನನ ಕಾಲಿಗೆ ತಗುಲಿರೂ ಬಗ್ಗೆ ಅನುಮಾನ ಮೂಡಿದೆ. ಮಾವುತರ ಹೇಳಿಕೆ ಇಂಥದ್ದೊAದು ಅನುಮಾನ ಮೂಡಿಸಿದೆ. ಕಾಲಿಗೆ ಗುಂಡು ಬೀಳುತ್ತಲೇ ಬಲ ಕಳೆದುಕೊಂಡ ಅರ್ಜುನನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ಪಡೆದಿದೆ. ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬ ಒತ್ತಾಯ ಅನೇಕರಿಂದ ಕೇಳಿ ಬಂದಿದೆ.

ಇಲ್ಲೇ ಸ್ಮಾರಕ ನಿರ್ಮಿಸಿ:
ಅರ್ಜುನನ ಸಾವು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಆತನ ಅಂತ್ಯಸAಸ್ಕಾರ ನಡೆದ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಅರ್ಜುನನ ಇತಿಹಾಸ, ಸಾಧನೆ, ಶೌರ್ಯ ಎಲ್ಲರಿಗೂ ತಿಳಿಯಬೇಕು. ಈ ಸಂಬAಧ ನಾನು ಅರಣ್ಯ ಮಂತ್ರಿ ಜೊತೆ ಚರ್ಚಿಸುತ್ತೇನೆ. ಸಕಲೇಶಪುರದ ಜನತೆ, ಅನೇಕ ಸಂಘ ಸಂಸ್ಥೆಗಳು ಇದೇ ಒತ್ತಾಯ ಮಾಡುತ್ತಿವೆ. ಅರ್ಜುನನ ಸ್ಮಾರಕ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ.
-ಸಿಮೆಂಟ್ ಮಂಜು, ಸ್ಥಳೀಯ ಶಾಸಕ

ನಮ್ಮ ದುರದೃಷ್ಟ, ಅರ್ಜುನನ್ನು ಕಳೆದುಕೊಂಡಿರುವುದು ಅತೀವ ನೋವು ತಂದಿದೆ. ಆತ ಅರಮನೆಗೆ ಬಂದಾಗಿನಿAದ ನಾನೇ ಪೂಜೆ ಮಾಡುತ್ತಿದ್ದೆ. ನನ್ನ ಒಬ್ಬ ಸಹೋದರನನ್ನು ಕಳೆದುಕೊಂಡAತಾಗಿದೆ. ರಾಷ್ಟçಪತಿಗೆ ಕೊಡುವ ಗೌರವ ಕೊಟ್ಟು ದಸರೆಯಲ್ಲಿ ಭಾಗಿಯಾಗುತ್ತಿದ್ದ ಸಾಕಾನೆಗಳನ್ನು ಅರಮನೆ ಒಳಗೆ ಕರೆದುಕೊಳ್ಳುತ್ತಿದ್ದೆವು. ರಾಜ ಗಾಂಭೀರ್ಯದಿAದ ಅಂಬಾರಿ ಹೊತ್ತು ನಡೆವಾಗ ನೋಡುವುದೇ ಒಂದು ಸಂತೋಷ ಆಗುತ್ತಿತ್ತು ಎಂದು ಭಾವುಕರಾದರು.

-ರಾಜ ಮನೆತನದ ಪುರೋಹಿತ ಪ್ರಹ್ಲಾದ್,