ಅಶ್ಲೀಲ ವಿಡಿಯೋ ಅಪ್ಲೋಡ್ ಆರೋಪ; ಟ್ರೋಲರ್ ಪ್ರಜ್ವಲ್ ಬಂಧನ!

ಟ್ರೋಲ್ ದುಶ್ಯಾಸನ ಎನ್ನುವ ಟ್ರೋಲ್ ಪೇಸ್ ಅಡ್ಮಿನ್ ಈ ಪ್ರಜ್ವಲ್

ಮೂಡಿಗೆರೆ: ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಆರೋಪದಲ್ಲಿ ಮೂಡಿಗೆರೆ ತಾಲ್ಲೂಕಿನ ಸಂಸೆ ಗ್ರಾಮದ ಬಸರೀಕಲ್ಲು ಪ್ರದೇಶದ ಸಿ.ಪ್ರಜ್ವಲ್ (25) ಎಂಬಾತನನ್ನು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ.

ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲಿ ‘ಟ್ರೋಲ್‌ ದುಶ್ಯಾಸನ’ ಎಂಬ ಪೇಜ್ ಮತ್ತು ಚಾನಲ್ ಮೂಲಕ ನಗ್ನ ಮತ್ತು ಅರೆನಗ್ನ ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಬಗ್ಗೆ ಬಂದ ಮಾಹಿತಿ ಆಧರಿಸಿ ಪೇಜ್‌ನ ಅಡ್ಮಿನ್ ಪ್ರಜ್ವಲ್ ವಿರುದ್ಧ ಐ.ಟಿ ಕಾಯ್ದೆ 67 ಮತ್ತು 67(ಎ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಕುದುರೆಮುಖ ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ಜತೆಗೆ ಮಹಿಳೆಯರ ಖಾಸಗಿತನ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯ ಸಾಲುಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.

‘ನಿರ್ದಿಷ್ಟ ವಿಡಿಯೊ ಹಂಚಿಕೆ ಮಾಡಿದ್ದಾರೆ ಎಂದಲ್ಲ. ಚಾನಲ್ ಮಾಡಿಕೊಂಡು ಬೇರೆ ಬೇರೆ ಅಶ್ಲೀಲ ವಿಡಿಯೊ ಹಂಚುತ್ತಿದ್ದರು ಎಂಬ ಆರೋಪದಲ್ಲಿ ಬಂಧಿಸಲಾಗಿದೆ’
-ವಿಕ್ರಮ ಅಮಟೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ