ಸಿದ್ದರಾಮಯ್ಯ ಆಧುನಿಕ ಚಾರ್ವಾಕ: ಸಿ.ಟಿ.ರವಿ ಟೀಕಾಪ್ರಹಾರ

ಸಿದ್ದರಾಮಯ್ಯ ಅವರ ಸಿದ್ರಾಮಿಕ್ಸ್ ರಾಜವನ್ನು ದಿವಾಳಿ ಕಡೆಗೆ ತೆಗೆದುಕೊಂಡು ಹೋಗುತ್ತಿದೆ.

ಹಾಸನ: ಸಾಲ ಮಾಡಿ ತುಪ್ಪ ತಿನ್ನುವುದು ಚಾರ್ವಾಕ ನೀತಿ. ಅದನ್ನು ಅನುಸರಿಸಿ ರಾಜ್ಯವನ್ನು ದಿವಾಳಿ ಮಾಡುತ್ತಿರುವ ಸಿದ್ದರಾಮಯ್ಯ ಆಧುನಿಕ ಚಾರ್ವಾಕ ಎಂದು ಮಾಜಿ‌ ಸಚಿವ ಸಿ.ಟಿ.ರವಿ ಸಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂತ ಇಲ್ಲ, ಭವಿಷ್ಯ ಗ್ಯಾರೆಂಟಿ ಇಲ್ಲ, ಬರೀ ವರ್ತಮಾನ ಗ್ಯಾರೆಂಟಿ ಅನ್ನುವುದು ಚಾರ್ವಾಕನ ನೀತಿ ಕೇವಲ ವರ್ತಮಾನದಲ್ಲಿ ಸಾಲ ಮಾಡಿಯಾದರೂ ಕೂಡ ತುಪ್ಪ ತಿನ್ನು ಮತ್ತು ಲೂಟಿ ಮಾಡು ಎಂಬ ನೀತಿಗೆ ಕಾಂಗ್ರೆಸ್ ಅಂಟಿಕೊಂಡಿದೆ ಎಂದು ಟೀಕಿಸಿದರು.

ಕೇರಳದಲ್ಲಿ ಸಾಲದ ಶೂಲದಲ್ಲಿ ಇಡೀ ಸರ್ಕಾರ ಸಿಲುಕಿದ್ದು ದಿವಾಳಿ ಹಂಚಿಗೆ ತುಲುಪಿದೆ. ಕರ್ನಾಟಕವೂ ಅದೇ ಹಾದಿಯಲ್ಲಿದೆ, ಇದನ್ನು ದು:ಖದಲ್ಲಿ ಹೇಳುತ್ತಿದ್ದೇನೆ ಎಂದರು.

ಸಿದ್ದರಾಮಯ್ಯ ಅವರ ಸಿದ್ರಾಮಿಕ್ಸ್ ರಾಜವನ್ನು ದಿವಾಳಿ ಕಡೆಗೆ ತೆಗೆದುಕೊಂಡು ಹೋಗುತ್ತಿದೆ. ಅವರ ತಪ್ಪು ನೀತಿಯಿಂದ ಕೇರಳದ ಹಾದಿಯಲ್ಲಿ ಕರ್ನಾಟಕ ನಡಿತ್ತಿರುವುದು ದುರ್ದೈವದ ಸಂಗತಿ

ನೀವು ಹನ್ನೊಂದು ತಿಂಗಳಿನಲ್ಲಿ ಯಾವ ಹೊಸ ಯೋಜನೆ ಕೊಟ್ಟಿದ್ದೀರಿ? ಕಾಂಗ್ರೆಸ್ ಶಾಸಕರನ್ನು ಕೇಳಿದರೆ ಒಂದು ರೂಪಾಯಿ ಕೊಟ್ಟಿಲ್ಲ ಅನ್ನುತ್ತಾರೆ. ನಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ ಅಂತ ಹಿರಿಯ ಸಚಿವರು ಹೇಳ್ತಾರೆ.

ಎಂಎಲ್‌ಎಗಳನ್ನು ಸಂತೃಪ್ತಿಪಡಿಸಲು 80 ರಿಂದ 85 ಜನರಿಗೆ ಕ್ಯಾಬಿನೆಟ್ ರ‌್ಯಾಂಕ್ ಕೊಟ್ಟಿದ್ದಾರೆ. ದೇವರಾಜ ಅರಸು ಕಾಲದಲ್ಲಿ ಪರ್ಸ್ ಕೊಡುವ ಪದ್ಧತಿ ಇತ್ತಂತೆ. ಈಗ ಎಂಎಲ್‌ಎಗಳನ್ನು ತೃಪ್ತಿ ಪಡಿಸಲು, ಅಸಮಾಧಾನ ಸ್ಪೋಟಗೊಳ್ಳದೇ ಇರಲು ಸೂಟ್‌ಕೇಸ್ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸೂಟ್‌ಕೇಸ್ ಕೊಟ್ಟು ಕೊಟ್ಟು ಸಮಾಧಾನ ಮಾಡ್ತಾ ಇದ್ದಾರೆ. ದೇವರಾಜು ಅರಸು ಮುಖ್ಯಮಂತ್ರಿ ಆಗಿದ್ದಾಗ 70ರ ದಶಕದಲ್ಲಿ ಪರ್ಸ್ ಕೊಡೋರಂತೆ, ಪ್ಯಾಕೇಟ್ ಮನಿ ಅಂತ. ಈಗ ಸಿದ್ರಾಮಿಕ್ಸ್‌ನ ಪರಿಣಾಮ ರಾಜ್ಯ ದಿವಾಳಿ ಕಡೆಗೆ ಹೋಗ್ತಿದೆ. ಅವರದ್ದೇ ಪಕ್ಷದ ಎಂಎಲ್‌ಎಗಳು ಆಕ್ರೋಶಗೊಂಡಿದ್ದಾರೆ.

ಅವರನ್ನು ಸಮಾಧಾನ ಮಾಡಲು ಕೆಲವು ಸಚಿವರಿಗೆ ನೀನು ಇಷ್ಟು ಎಂಎಲ್‌ಎಗಳಿಗೆ ಸೂಟ್‌ಕೇಸ್ ಕೊಡು ಅಂತ ಸೂಟ್‌ಕೇಸ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಹೀಗೇ ಮುಂದುವರಿದರೆ ಕೇರಳದ ಮಾದರಿಯಲ್ಲಿ ದಿವಾಳಿಯ ಸ್ಥಿತಿಗೆ ಕರ್ನಾಟಕವನ್ನು ಮುಟ್ಟಿಸುತ್ತಾರೆ ಎಂದರು.

ಈ ನೀತಿ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಸ್ವತಂತ್ರ ಬಂದ ನೂರು ವರ್ಷದ ಕಾಲಕ್ಕೆ ಭಾರತ ವಿಶ್ವಗುರು ಆಗಬೇಕು. ಆರ್ಥಿಕವಾಗಿ ದೊಡ್ಡ ಶಕ್ತಿಯಾಗಬೇಕು. ಅದರ ಸೂಚನೆಗಳು ಟ್ರೈಲರ್‌ನಲ್ಲಿ ಕಾಣುತ್ತಿದೆ ಎಂದರು.