ಬೇಲೂರು ಪುರಸಭೆ ಅಧ್ಯಕ್ಷರ ವಿರುದ್ಧವೇ ವಾಮಾಚಾರ!; ಕುರ್ಚಿ ಹಿಂಭಾಗದ ಮರಕ್ಕೆ ಮಾಟದ ಸಾಮಗ್ರಿ ಇರಿಸಿ‌ ಮೊಳೆ ಹೊಡೆದ ದುಷ್ಕರ್ಮಿಗಳು

ಹಾಸನ: ಬೇಲೂರು ಪುರಸಭೆ ಕಟ್ಟಡದ ಹಿಂಭಾಗ ವಾಮಾಚಾರದ ವಸ್ತುಗಳು ಪತ್ತೆಯಾಗಿದ್ದು, ಪುರಸಭೆ ಅಧ್ಯಕ್ಷ ಅಶೋಕ್ ಅವರ ವಿರುದ್ಧ ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ ಎನ್ನಲಾಗುತ್ತಿದೆ.

ದುರುಳರು ಪುರಸಭೆ ಕಟ್ಟಡದ ಹಿಂಭಾಗ ಮತ್ತು ಅಧ್ಯಕ್ಷರು ಕೂರುವ ಕುರ್ಚಿ ಹಿಂದಿರುವ ಮರದಲ್ಲಿ ನಿಂಬೆಹಣ್ಣು, ವೀಳ್ಯದೆಲೆ, ತಗಡು, ಅರಿಸಿನ-ಕುಂಕುಮ ಹಾಗೂ ಕುಡಿಕೆಯನ್ನು ಬಳಸಿಕೊಂಡು ವಾಮಾಚಾರ ನಡೆಸಿದ್ದಾರೆ. ಮರಕ್ಕೆ ಮೊಳೆ ಹೊಡೆಯಲಾಗಿದೆ.

ಆಶೋಕ್  ಆಕ್ರೋಶ
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಬೇಲೂರು ಪುರಸಭೆಯ ಅಧ್ಯಕ್ಷರಾಗಿರುವ ಅಶೋಕ್, ಈ ಘಟನೆಗೆ ಸ್ವಪಕ್ಷದ ಸದಸ್ಯರ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದಾರೆ.

“ನನಗೆ ಕೆಲಸ ಮಾಡಲು ನಮ್ಮ ಪಕ್ಷದ ಸದಸ್ಯರೇ ಬಿಡುತ್ತಿಲ್ಲ. ಪ್ರತಿಯೊಂದು ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದಾರೆ,” ಎಂದು ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಯ ನಂತರ ಅಧ್ಯಕ್ಷ ಅಶೋಕ್ ವಾಮಾಚಾರದ ಎಲ್ಲಾ ವಸ್ತುಗಳನ್ನು ಮರದಿಂದ ತೆಗೆದು ಸುಟ್ಟುಹಾಕಿದರು. ಈ ಘಟನೆ ಬೆನ್ನಿಗೇ ಕಾಂಗ್ರೆಸ್ ಪುರಸಭಾ ಸದಸ್ಯರ ನಡುವೆ ಉಂಟಾಗಿರುವ ಬಿರುಕು ಹೆಚ್ಚು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

ಈ ವಿಚಾರ ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.