ಹಿಂದೂ ಕಾರ್ಯಕರ್ತರ ಬಂಧನ ಬಿಜೆಪಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಹಾಸನ: ಕರ ಸೇವಕ, ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಹಾಗೂ ಇತರರನ್ನು ಬಂಧಿಸಿರುವುದನ್ನು ಖಂಡಿಸಿ ನಗರದಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಎದುರು ಜಮಾವಣೆಗೊಂಡ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧರ್ಮ ದಂಗಲ್ ನಡೆಯುತ್ತಿದೆ. ಮುಸಲ್ಮಾನರ ತುಷ್ಟೀಕರಣ ಹೆಚ್ಚಾಗುತ್ತಿದೆ ಎಂದು ದೂರಿದರು. ಒಂದೆಡೆ ಮುಸ್ಲಿಂರನ್ನು ಓಲೈಕೆ ಮಾಡುವ ಮೂಲಕ ಮತ್ತೊಂದೆಡೆ ಹಿಂದೂಗಳನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ರಾಮ ಮಂದಿರ ಉದ್ಘಾಟನೆ ಹೊತ್ತಿನಲ್ಲಿ ೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸ ನಂತರ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ಸಂಬAಧ ೩೧ ವರ್ಷಗಳ ನಂತರ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿರುವುದು ಖಂಡನೀಯ.
ಇದು ರಾಜ್ಯ ಸರ್ಕಾರದ ಉದ್ದೇಶವನ್ನು ತೋರಿಸುತ್ತದೆ. ಈ ಮೂಲಕ ರಾಜ್ಯ ಸರ್ಕಾರ ಪದೇ ಪದೆ ರಾಜ್ಯದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. ನ್ಯಾಯಾಲಯದಿಂದ ಖುಲಾಸೆಗೊಳ್ಳುವವರೆಗೂ ಅಪರಾಧಿ ಅಪರಾಧಿಯೇ ಆಗಿರುತ್ತಾನೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಹಿಂದೂ ವಿರೋಧಿಯಾಗಿದೆ. ರಾಮಭಕ್ತರನ್ನು ಬಂಧಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕದುಡವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಇದು ಹಿಂದೂ ವಿರೋಧಿ ಸರ್ಕಾರ, ರಾಜಕೀಯ ಓಲೈಕೆಗಾಗಿಯೇ ಈ ಸರ್ಕಾರ ಬಂದ ನಂತರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮುಸಲ್ಮಾನರ ಮೇಲಿದ್ದ ಕೇಸ್‌ಗಳನ್ನು ಕೈ ಬಿಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅವರು ಅಮಾಯಕರು ಎಂದು ಅದರಲ್ಲಿ ಬರೆಯಲಾಗಿತ್ತು. ಈ ರೀತಿಯಾಗಿ ರಾಜ್ಯ ಸರ್ಕಾರ ಒಂದು ಸಮುದಾಯವನ್ನು ತುಷ್ಟೀಕರಿಸುವ ಕೆಲಸ ಮಾಡುತ್ತಿದೆ. ಇದು ತಾಲಿಬಾನ್ ಸರ್ಕಾರ ಎಂದು ಧಿಕ್ಕಾರ ಕೂಗಿದರು. ಕೂಡಲೇ ಕರ ಸೇವಕರನ್ನು ಬಿಡುಗಡೆ ಮಾಡದೇ ಇದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್, ರಾಜ್ಯ ವಕ್ತಾರ ದೇವರಾಜೇಗೌಡ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಕಿರಣ್ ಹೆಚ್.ಪಿ., ಚನ್ನಕೇಶವ, ನಾಗೇಶ್, ಶೋಭನ್ ಬಾಬು, ರಕ್ಷಿತ್, ಪ್ರಸನ್ನಕುಮಾರ್, ಗಗನ್ ಗಾಂಧಿ ಮೊದಲಾದವರಿದ್ದರು.