ಬಿಜೆಪಿ ಪರ ಪ್ರಚಾರ ಆರಂಭಿಸಿದ್ದೇನೆ‌ ಹೊರತು ಬಂಡಾಯವಲ್ಲ; ರಾಜಕೀಯ ಗುರು ಪ್ರೀತಂಗೌಡರ ಆಶೀರ್ವಾದ ನನ್ನ‌ ಮೇಲಿದೆ ಎಂದ ಎಚ್.ಪಿ. ಕಿರಣ್ ಗೌಡ

ನಮಗೇ ಟಿಕೆಟ್ ಸಿಗುವ ವಿಶ್ವಾಸವಿದೆ

ಹಾಸನ : ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುವ ಮೂಲಕ ದೋಸ್ತಿ ಪಕ್ಷ ಜೆಡಿಎಸ್ ಗೆ ಟಾಂಗ್ ನೀಡಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಚ್.ಪಿ.ಕಿರಣ್‌ಕುಮಾರ್, ನಾನು ಬಿಜೆಪಿ ಪರ ಪ್ರಚಾರ ಶುರು ಮಾಡಿದ್ದೇನೆ ಹೊರತು ಪಕ್ಷದ ವಿರುದ್ದ ಬಂಡಾಯದ ಕೆಲಸ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದೇಶ್ವರ ದೇವಾಲಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಜೆಡಿಎಸ್ ಜತೆ ಮೈತ್ರಿ ಆಗಿದ್ದರೂ ಹಾಸನ ಕ್ಷೇತ್ರದ ಅಭ್ಯರ್ಥಿ ಅಂತಿಮ ಆಗಿಲ್ಲ.

ಕೊನೆ ಹಂತದಲ್ಲಿ ಅವಕಾಶ ಸಿಕ್ಕರೆ ತಯಾರಿ ಮಾಡಲು ಆಗಲ್ಲ, ಹಾಗಾಗಿ ಈಗಿಂದಲೇ ತಯಾರಿ ಶುರು ಮಾಡಿದ್ದೇನೆ. ಹಾಗಾಗಿಯೇ ನಾನು ನಾಮಪತ್ರ ಅರ್ಜಿ ತಂದಿದ್ದೇನೆ. ನಾನು ಈಗಲೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ ಎಂದರು.

ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತೊ ಅದಕ್ಕೆ ನಾವು ಬದ್ದವಾಗಿರುತ್ತೇವೆ. ನಮ್ಮನ್ನು ಅಭ್ಯರ್ಥಿ ಮಾಡಿದರೆ ಅವರು ನಮ್ಮ ಪರ ಕೆಲಸ ಮಾಡ್ತಾರೆ. ಅವರು ಅಭ್ಯರ್ಥಿ ಆದರೆ ನಾವು ಅವರ ಪರ ಕೆಲಸ ಮಾಡ್ತೇವೆ. ಈಗಲೂ ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.

ನನ್ನ ರಾಜಕೀಯ ಗುರು ಪ್ರೀತಂಗೌಡ, ನಾನು ಇಂದಿನಿಂದ ಪ್ರಚಾರ ಶುರುಮಾಡಿರುವುದರ ಹಿಂದೆ ಅವರ ಪ್ರಭಾವ ಇಲ್ಲ. ನಮ್ಮ ಕಾರ್ಯಕರ್ತರ ಅಭಿಪ್ರಾಯದಂತೆ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ಅಧಿಕೃತವಾಗಿ ಪಕ್ಷದಿಂದ ಇನ್ನೂ ಮೈತ್ರಿ ಅಭ್ಯರ್ಥಿ ಬಗ್ಗೆ ಹೇಳಿಲ್ಲ. ಜಿಲ್ಲೆಯಲ್ಲಿ ಮೈತ್ರಿಯ ಯಾವುದೇ ಜಂಟಿ ಸಭೆ ಆಗಿಲ್ಲ, ಹಾಸನ, ಮಂಡ್ಯ ಎಲ್ಲಾ ಕಡೆ ಗೊಂದಲ ಇದೆ ಎಂದು ಹೇಳಿದರು.

ನಮಗೆ ಟಿಕೆಟ್ ಕೊಡಿ ಎಂದು ಕೇಳೋದು ನಮ್ಮ ಪ್ರಯತ್ನ, ಪ್ರೀತಂಗೌಡ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಅವರು ಬ್ಯುಸಿ ಇದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇದ್ದೇ ಇರುತ್ತೆ. ಪಕ್ಷ ಏನು ಸೂಚನೆ ಕೊಡುತ್ತೋ ಅದನ್ನ ನಾನು ಮಾಡ್ತೇನೆ. ಮೋದಿ ಮತ್ತೆ ಪ್ರದಾನಿ ಆಗಬೇಕು ಎನ್ನುವುದು ಜನರ ಭಾವನೆಯಾಗಿದೆ. ಹಾಗಾಗಿ ನಾವು ಪಕ್ಷದ ಪರ ಪ್ರಚಾರ ಆರಂಭಿಸುತ್ತೇವೆ ಎಂದರು.