ಚನ್ನಪಟ್ಟಣ ಗೆದ್ದೇಬಿಟ್ಟೆವು ಎಂದವರ ಬ್ಯಾಟರಿ ಈಗ ಡೌನ್ ಆಗಿದೆ: ಬಿ.ವೈ.ವಿಜಯೇಂದ್ರ ಟಾಂಗ್

ಹಾಸನ: ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ ಮೇಲೆ ಇನ್ನೇನು ಗೆದ್ದೇ ಬಿಟ್ಟೆವು ಎನ್ನುವ ಭ್ರಮೆಯಲ್ಲಿದ್ದ ಕೆಲವರ ಬ್ಯಾಟರಿ ಡೌನ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಾಂಗ್ ನೀಡಿದರು.

ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಉಪಚುನಾವಣೆಗಳು ನಡೆಯುತ್ತಿವೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್‌ಕುಮಾರಸ್ವಾಮಿ, ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಸ್ಪರ್ಧಿಸಿದ್ದಾರೆ.

ಮೂವರು ಅಭ್ಯರ್ಥಿಗಳು ಚುನಾವಣೆಯಲ್ಲಿ ಯಶಸ್ಸು ಕಾಣುತ್ತಾರೆ, ಎಲ್ಲರೂ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಸಂಡೂರಿನಲ್ಲಿ ಐತಿಹಾಸಿಕ ಗೆಲುವು ದೊರೆಯಲಿದೆ. ಸಂಡೂರಿನಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಅಲ್ಲೂ ಕೂಡ ಬಿಜೆಪಿ ಗೆಲ್ಲುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಚನ್ನಪಟ್ಟಣದಲ್ಲಿ ಗೆದ್ದೇ ಬಿಟ್ಟೆ ಎನ್ನುವ ಭ್ರಮೆಯಲ್ಲಿದ್ದವರಿಗೆ ವಾಸ್ತವಿಕ ಪರಿಸ್ಥಿತಿ ಈಗ ಅರ್ಥ ಆಗುತ್ತಿದೆ. ವಾತಾವರಣ ದಿನೇ ದಿನೆ ಎನ್‌ಡಿಎ ಅಭ್ಯರ್ಥಿ ಪರ‌ ನಿರ್ಮಾಣವಾಗಿದೆ. ನಿಶ್ಚಿತವಾಗಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ಲುತ್ತಾರೆ ಎಂದು ಹೇಳಿದರು.