ಸಕಲೇಶಪುರ ಪ್ರವಾಸ ರದ್ದುಪಡಿಸಿ ಬೆಂಗಳೂರಿಗೆ ಹೊರಟ ಬಿ.ವೈ.ವಿಜಯೇಂದ್ರ; ಮುಂದುವರಿದ ಪ್ರೀತಂಗೌಡ ಟೀಂ ಕುತೂಹಲ

ಮಳಲಿ ದೇವಾಲಯಕ್ಕೆ ಭೇಟಿ ನೀಡಬೇಕಿದ್ದ ವಿಜಯೇಂದ್ರ

ಹಾಸನ: ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಟೀಂ ಭಿನ್ನಮತ ಹೊಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ಸಕಲೇಶಪುರ ಪ್ರವಾಸವನ್ನೇ ರದ್ದುಗೊಳಿಸಿ ಬೆಂಗಳೂರಿಗೆ ತೆರಳಿದರು.

ಚಿಕ್ಕಮಗಳೂರು ಜಿಲ್ಲೆಯಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯ ಸಕಲೇಶಪುರಣ ಮಳಲಿ ಈಶ್ವರ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸ್ಥಳೀಯ ಮೈತ್ರಿ ಮುಖಂಡರ ತಿಕ್ಕಾಟದ ಕಾರಣಕ್ಕಾಗಿ ವಿಜಯೇಂದ್ರ ಮಾಧ್ಯಮ ಕಣ್ಣು ತಪ್ಪಿಸಿ ಹೊರಟು ಹೋದರು.

ಶ‌ನಿವಾರ ಪ್ರೀತಂಗೌಡ ಆಪ್ತ ಕಿರಣ್ ಕುಮಾರ್ ನಾಮ ಪತ್ರಕ್ಕೆ ಪೂಜೆ ನೆರವೇರಿಸಿ ಸದ್ದು ಮಾಡಿದ್ದರು.

ಇಂದು ಮಧ್ಯಾಹ್ನ ಸಕಲೇಶಪುರ ಮಳಲಿ ಈಶ್ವರ ದೇವಾಲಯದ ಪೂಜೆಗೆ ಆಗಮಿಸಿದರೆ ತಾವು ಹೇಳಿಕೆ ನೀಡಬೇಕಾದ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂದು ಅವರು ಬೆಂಗಳೂರು ಹಾದಿ ಹಿಡಿದರು.

ವಿಜಯೇಂದ್ರ ಅವರೇ ಜೆಡಿಎಸ್ ತವರು ಜಿಲ್ಲೆಯಲ್ಲಿ ನಿಂತು ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡಲು ತಮ್ಮ ಮುಖಂಡರು, ಕಾರ್ಯಕರ್ತರಿಗೆ ಸೂಚಿಸಲಿದ್ದಾರೆ ಎಂಬ ಜೆಡಿಎಸ್ ನಾಯಕರ ನಿರೀಕ್ಷೆ ಹುಸಿಯಾಯಿತು.