ಹಾಸನದಲ್ಲಿ ಬಿಜೆಪಿಗೆ ಗೆಲುವಿನ ವಾತಾವರಣ ಇದೆ, ಪ್ರಜ್ವಲ್ ಎನ್.ಡಿ.ಎ.ಅಭ್ಯರ್ಥಿ ಎನ್ನುವುದು ತೀರ್ಮಾನ ಆಗಿಲ್ಲ; ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರೀತಂ ಜೆ.ಗೌಡ ಅಪಸ್ವರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ಹೆಸರು ಘೋಷಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ವಿರೋಧ ವ್ಯಕ್ತಪಡಿಸಿದ್ದು, ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ಅಂತ ಘೋಷಣೆ ಮಾಡಿಲ್ಲ ಎಂದರು.

ಹಾಸನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಒಂದು ಭಾಗವಾಗಿ ಬಂದಿದೆ ಎಂದರು.

ಬಿಜೆಪಿ ಕಾರ್ಯಕರ್ತರು ಬಿಜೆಪಿಗೆ ಟಿಕೆಟ್ ಕೇಳ್ತಿದ್ದಾರೆ. ಅದೇ ರೀತಿ ಆರ್‌ಪಿಐನವರು ರಾಜ್ಯದಲ್ಲಿ ಒಂದು ಸೀಟ್ ಕೊಡಿ ಅಂತ ಕೇಳ್ತಿದ್ದಾರೆ. ಹಾಗೇಯೇ ಜನತಾದಳದವರು ಸೀಟ್ ಕೇಳ್ತಿದ್ದಾರೆ. ಇದು ಸಹಜವಾಗಿದೆ.

ಇವತ್ತು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವಿನ ವಾತಾವರಣ ಇದೆ. ಯಾರು ಗೆಲ್ತಾರೆ ಅನ್ನೋದನ್ನು ಸರ್ವೆ ರಿಪೋರ್ಟ್ ಹೇಳುತ್ತೆ.

ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್‌ನ ಮೈತ್ರಿ ಅಭ್ಯರ್ಥಿ ಇದ್ದರು. ಜೆಡಿಎಸ್ -ಬಿಜೆಪಿ‌ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.ಬಿಜೆಪಿ‌ ಮತಗಳು ಕ್ರೋಡೀಕರಣವಾಗಿದ್ದವು.
ಈಗ ಇಬ್ಬರು ಬಿಜೆಪಿ ಶಾಸಕರಿದ್ದಾರೆ, ಒಳ್ಳೆಯ ರಾಜಕೀಯ ಪರಿಸ್ಥಿತಿ ಇದೆ.
ಹಾಗಾಗಿ ಬಿಜೆಪಿಗೆ ಅವಕಾಶಕೊಟ್ಟರೆ ಗೆಲುವಿನ ಅವಕಾಶ ಹೆಚ್ಚಿದೆ ಎನ್ನುವುದು ಮತದಾರರ ಭಾವನೆ ಎಂದರು.

ಎ.ಟಿ.ರಾಮಸ್ವಾಮಿ, ಸಿದ್ದೇಶ್ ನಾಗೇಂದ್ರ,‌ ಕಿರಣ್ ಸೇರಿ ಅನೇಕ ಸೂಕ್ತ ಅಭ್ಯರ್ಥಿಗಳಿದ್ದಾರೆ. ಬಿಜೆಪಿ ಅನೇಕ ಪ್ರಯೋಗಗಳನ್ನು ಮಾಡುತ್ತೆ.
ನನಗಂತೂ ಹಾಸನದಲ್ಲಿ ಬಿಜೆಪಿಗೆ ಅವಕಾಶ ಸಿಗುತ್ತೆ ಎನ್ನುವ ನಂಬಿಕೆ ಇದೆ.

ಜೆಡಿಎಸ್ ಯಾವ ಸೀಟ್ ಕೇಳ್ತಾರೆ, ಸರ್ವೆ ಮಾಡಿ ದೊಡ್ಡಮಟ್ಟದಲ್ಲಿ ತೀರ್ಮಾನ ಮಾಡ್ತಾರೆ.ಕಾರ್ಯಕರ್ತರ ಭಾವನೆ ತಿಳಿಸುವುದು ನನ್ನ ಜವಾಬ್ದಾರಿ ಎಂದರು.

ರಾಷ್ಟ್ರೀಯ ನಾಯಕರು ಲೋಕಸಭಾ ಚುನಾವಣೆ ವೇಳೆ ಯಾರಿಗೆ, ಯಾವ ಕ್ಷೇತ್ರ ಅಂತ ತೀರ್ಮಾನ ಮಾಡ್ತಾರೆ. ಎಲ್ಲಿ ಬಿಜೆಪಿ ಟಿಕೆಟ್ ಸಿಗುತ್ತೆ ಅಲ್ಲಿ ಜೆಡಿಎಸ್ ಸಹಕಾರ ಬೇಕಾಗುತ್ತೆ. ಎಲ್ಲಿ ಜೆಡಿಎಸ್‌ನವರು ಅಭ್ಯರ್ಥಿ ಹಾಕ್ತಾರೆ ಅಲ್ಲಿ ಬಿಜೆಪಿಯ ಸಹಕಾರ ಬೇಕಾಗುತ್ತದೆ ಎಂದರು.

ಮೈತ್ರಿ ನಂತರ ಪರಸ್ಪರ ಮತ ವರ್ಗಾವಣೆ ಆಗಬೇಕಾಗಿದೆ. ಆ ಸಮನ್ವಯ ಸಾಧಿಸಿದ ನಂತರ ಲಾಭವನ್ನು ಹೆಚ್ಚು ಅನುಕೂಲಕರವಾಗಿ ಬಳಸಿಕೊಳ್ಳುವ ಅಗತ್ಯ ಎರಡೂ ಪಕ್ಷಗಳಿಗೂ ಇದೆ.

ಆ ನಿಟ್ಟಿನಲ್ಲಿ ಸಮನ್ವಯದ ಸಭೆಗಳನ್ನು ಮಾಡುವ ಮೂಲಕ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ಯಾವ ಕ್ಷೇತ್ರಕ್ಕೆ ಯಾವ ಪಕ್ಷ ನಿಲ್ಲಬೇಕೆನ್ನುವುದು ಇನ್ನೂ ಚರ್ಚೆಯಲ್ಲಿದೆ.
ನರೇಂದ್ರಮೋಯವರು ಪ್ರಧಾನಮಂತ್ರಿ ಆಗಬೇಕು ಎನ್ನುವ ವಿಚಾರವೇ ಮಾನದಂಡ ಎಂದರು.

ಯಾವ ಕ್ಷೇತ್ರಕ್ಕೆ ಯಾವ ಪಕ್ಷದ ಅಭ್ಯರ್ಥಿಯಾಗಬೇಕು ಎನ್ನುವುದನ್ನು ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ಎರಡೂ ಪಕ್ಷಗಳ ವಿಚಾರ ಒಂದೇ ಆಗಿದೆ, ಅತೀ ಹೆಚ್ಚು ಸೀಟ್ ಗೆಲ್ಲಬೇಕು. ಗೆಲುವು ಒಂದೇ ಮಾನದಂಡ ಆಗಿರುತ್ತೆ ಎಂದು ಹೇಳಿದರು.

ಎಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಬೇಕೆಂದು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ದೇವೇಗೌಡರು ಮಾಜಿ ಪ್ರಧಾನಿ ಹಾಗೂ ಹಿರಿಯರು ,
ಅವರ ಪಕ್ಷಕ್ಕೆ ಎನ್‌ಡಿಎ ಕಡೆಯಿಂದ ಹಾಸನ ಕ್ಷೇತ್ರ ಸಿಕ್ಕದರೆ ಅವರ ಅಭ್ಯರ್ಥಿ ಪ್ರಜ್ವಲ್‌ ಆಗ್ತಾರೆ.

ಆದರೆ ಎಲ್ಲ ತೀರ್ಮಾನಕ್ಕೆ ಸಭೆ ಆಗಬೇಕು, ಕೋರ್ ಕಮಿಟಿ ಇದೆ, ಟಿಕೆಟ್ ಹಂಚಿಕೆ ಮಾಡುವ ತಂಡವಿದೆ ಎಲ್ಲರೂ ಸೇರಿ ತೀರ್ಮಾನ ಮಾಡ್ತಾರೆ ಎಂದರು.

ದೇವೇಗೌಡರು ಸರ್ವ ಸ್ವತಂತ್ರರಿದ್ದಾರೆ, ಹಿರಿಯರಿದ್ದಾರೆ, ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ನಮ್ಮಲ್ಲೆರಿಗೂ ಅವರ ಮೇಲೆ ಅಪಾರವಾದ ಗೌರವವಿದೆ. ಆದರೆ ಟಿಕೆಟ್ ಬಗ್ಗೆ ಚರ್ಚೆ ಮಾಡೋದು ಎನ್‌ಡಿಎ ಸಭೆಯಲ್ಲಿ, ಅಲ್ಲಿ ತೀರ್ಮಾನ ಆಗುತ್ತೆ.

ಎನ್‌ಡಿಎ ಸಭೆ ನಂತರ ಯಾರಿಗೆ ಸೀಟ್ ಸಿಗುತ್ತೆ ಅಂತ ಹೇಳೋದು ಸಹಜ, ಅದು ಅವರ ಆಯ್ಕೆ , ಅದಕ್ಕೆ ಬಿಜೆಪಿ ಹಸ್ತಕ್ಷೇಪ ಮಾಡಲ್ಲ. ಈಗ ಅವರು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ ಅಂತ ಹೇಳಿದ್ದಾರೆ, ಅದರಲ್ಲಿ ತಪ್ಪೇನಿಲ್ಲ. ಯಾರ‌್ಯಾರಿಗೆ ಯಾವ ಕ್ಷೇತ್ರ ಅನ್ನೋದು ಇನ್ನೂ ತೀರ್ಮಾನ ಆಗಿಲ್ಲ ಎಂದರು.

ಅವರ ಎಲ್ಲ ಭಾವನೆಯನ್ನು ಗೌರವಿಸುವಂತಹ ಕೆಲಸವನ್ನು ಬಿಜೆಪಿ ಮಾಡುತ್ತೆ. ಸಲಹೆಯನ್ನು ಕೂಡ ಸ್ವೀಕರಿಸುತ್ತೆ.

ಅವರು ಹೇಳಿರುವುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದರು