ಹಾಸನ: ನಗರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿಗೆ ಪರ್ಯಾಯವಾಗಿ ಅಭ್ಯರ್ಥಿ ನಿಲ್ಲಿಸಿ ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾದ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಕೆಂಡಾಮಂಡಲರಾಗಿದ್ದಾರೆ.
ನಾನು ಜೆಡಿಎಸ್ ಸದಸ್ಯರ ಓಟು ಹಾಕಿಸಿಕೊಳ್ಳಬಹುದಾಗಿತ್ತು. ನಾನೇನೂ ಅಸಹಾಯಕನಲ್ಲ, ನನಗೂ ಶಕ್ತಿ ಇತ್ತು. ಇದು ಸಾರ್ವಜನಿಕರಲ್ಲಿ ಬೇಸರ ತರುವ ಸಂಗತಿಯಾಗಿದೆ.
ಮೈತ್ರಿ ಎಂದರೆ ಪರಸ್ಪರ ಒಡಂಬಡಿಕೆ . ಮೈತ್ರಿ ಧರ್ಮವನ್ನು ಬಿಜೆಪಿ ಪಾಲಿಸಿದೆ. ಸಾಂದರ್ಭಿಕ ಶಾಸಕರಿಗೆ ಸಾಂದರ್ಭಿಕವಾಗಿ ಏನು ನಡೆಯುತ್ತದೆ ಅಂತ ಗೊತ್ತಿರಲ್ಲ. ಇದು ಶಾಸಕರು ಮಾಡುವ ತೀರ್ಮಾನ ಅಲ್ಲ. ಶಾಸಕರ ಕಿಮ್ಮತ್ತು ಎಷ್ಟು? ಎಷ್ಟು ಗೌರವವಿದೆ ಅಂತ ಅವರು ತೀರ್ಮಾನ ಮಾಡಬೇಕು ಎಂದು ಕಿಡಿಕಾರಿದರು.
ಅದು ಶಾಸಕರ ವೀಕ್ನೆಸ್, ಅವರ ಪಕ್ಷದವರೇ ಅವರಿಗೆ ಹೇಳಿಲ್ಲ. ಸ್ವರೂಪ್ ಅವರಿಗೆ ಏನು ಗೊತ್ತಿದೆ? ಅವರ ಕ್ಷೇತ್ರದ ಬಗ್ಗೆಯೇ ಗೊತ್ತಿಲ್ಲ, ಒಂದು ಗುದ್ದಲಿ ಪೂಜೆ ಮಾಡಿಲ್ಲ. ಇನ್ನೂ ಪ್ರೊಬೆಷನರಿ ಪಿರಿಯಡ್‌ನಲ್ಲಿ ಇದ್ದಾರೆ. ಇನ್ನೂ ಮೂರುವರೆ ವರ್ಷ ಹಾಗೇ ಇರ್ತಾರೆ. ಅವರು ಕೆಲಸ ಮಾಡಿದ ಮೇಲೆ ಅವರನ್ನು ಸಿರಿಯಸ್ ಆಗಿ ತಗೋತಿನಿ ಎಂದರು.
ಇದು ಎಚ್.ಡಿ.ರೇವಣ್ಣ, ಅಶ್ವಥ್‌ನಾರಾಯಣ್, ಆರ್.ಅಶೋಕ್ ಮಾಡಿರುವ ತೀರ್ಮಾನ. ನಾವು ಮೈತ್ರಿ ಧರ್ಮವನ್ನು ಪಾಲಿಸಿದ್ದೇವೆ. ಸ್ವರೂಪ್ ಅವರನ್ನು ಅವರ ಪಕ್ಷದವರೇ ಸಿರಿಯಸ್ ಆಗಿ ತಗೊಂಡಿಲ್ಲ. ಬಿಜೆಪಿಯ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷ ಮಾಡುವ ಶಕ್ತಿ ನನಗಿತ್ತು. ಮೈತ್ರಿ ಏಕೆ ಆಗಿಲ್ಲ ಅನ್ನೋದನ್ನ ಅವರ ಪಕ್ಷದವರು ಹೇಳಬೇಕು.
ಈ ಬಗ್ಗೆ ಜೆಡಿಎಸ್-ಬಿಜೆಪಿ ರಾಜ್ಯ ನಾಯಕರು ಚರ್ಚೆ ಮಾಡ್ತಾರೆ. ಅವರು ಸಾಂದರ್ಭಿಕ ಶಾಸಕರು, ಹತ್ತು ತಿಂಗಳ ನಂತರ ಅವರು ಅಧಿಕಾರ ಬಿಟ್ಟು ಕೊಡಲಿಲ್ಲ ಅಂದರೆ ಹಾಸನ ನಗರಸಭೆಯಲ್ಲಿ ಜೆಡಿಎಸ್‌ನವರಿಗೆ ಇದೇ ಕೊನೇ ಅಧಿಕಾರ ಆಗುತ್ತೆ. ಮುಂದೆ ಬಿಜೆಪಿಯೇ ಅಧಿಕಾರದಲ್ಲಿರುತ್ತೆ. ಬಿಜೆಪಿ ಸದಸ್ಯನಿಗೆ ಅಧಿಕಾರ ಸಿಗುವ ಹಾಗೇ ಮಾಡ್ತಿನಿ ಎಂದು ಎಚ್ಚರಿಸಿದರು.
ಸಾಂದರ್ಭಿಕ ಮತಗಳು ಅವರ ಜೊತೆ ಇಲ್ಲ. ಅವರಿಗೆ ಮತ ಹಾಕಿದ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ಸಿಗುತ್ತೆ ಎಂದು ಕಾಯುತ್ತಿದ್ದರು. ಶಾಸಕರು ಯಾವ ಮತಗಳಿಂದ ಗೆದ್ದಿದ್ದಾರೆ ಎನ್ನುವುದು ಗೊತ್ತಿದೆ. ಆ ಋಣವನ್ನಾದರೂ ತೀರಿಸುತ್ತಾರೆ ಅಂದು ಕೊಂಡಿದ್ದೆ. ಅದನ್ನೂ ಮಾಡಲಿಲ್ಲ, ಮೈತ್ರಿ ಧರ್ಮವನ್ನು ನಾವು ಶಿರಸಾವಹಿಸಿ ಪಾಲಿಸಿದ್ದೇವೆ. ಹತ್ತು ತಿಂಗಳ ನಂತರ ಅಧಿಕಾರ ಕೊಡಲಿಲ್ಲ ಎಂದರೆ ಮುಂದಿನ ನಗರಸಭೆ ಚುನಾವಣೆಯಲ್ಲಿ ಎರಡು ಅಂಕಿ ದಾಟಲು ಬಿಡಲ್ಲ ಎಂದು ಗುಡುಗಿದರು.