ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ, ಸಾಯುತ್ತಿರುವವರನ್ನು ಸಾಯಿಸುವ ಅಗತ್ಯ ನಮಗಿಲ್ಲ ಎಂದ ಬಿಜೆಪಿ ಉಸ್ತುವಾರಿ ಅಗರ್ವಾಲ್

ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುವುದನ್ನು ತಪ್ಪಿಸಲು ಆಗಲ್ಲ

ಹಾಸನ: ರಾಜ್ಯದ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಬಣಗಳ ನಡುವಿನ ದ್ವೇಷದಿಂದಲೇ ಪತನಗೊಳ್ಳಲಿದ್ದು, ಸಾಯುತ್ತಿರುವವರನ್ನು ಸಾಯಿಸುವ ಅಗತ್ಯ ನಮಗಿಲ್ಲ ಎಂದು‌ ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಮೋಹನ್‌ದಾಸ್ ಅಗರ್‌ವಾಲ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಅಭ್ಯರ್ಥಿಗಳಿಗೆ ಗೊತ್ತಾಗಿದೆ. ಆದ್ದರಿಂದ ಸಿದ್ದರಾಮಯ್ಯ ತಮ್ಮ ಮಂತ್ರಿಗಳನ್ನು ಕರೆದು ನಿಮ್ಮ ಮಕ್ಕಳನ್ನು ನಿಲ್ಲಿಸಿ ಗೆಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಇಲ್ಲವಾದಲ್ಲಿ ನಿಮ್ಮನ್ನು ಮಂತ್ರಿ ಮಂಡಲದಿಂದ ವಜಾ ಮಾಡ್ತಿನಿ ಅಂತ ಧಮ್ಕಿ ಹಾಕಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಸಚಿವರು ತಮ್ಮ ಮಕ್ಕಳು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು.

ಹಾಗಾಗಿ ಈ ಚುನಾವಣೆ ಮನೆಯಲ್ಲಿ ಕುಳಿತು ಗೆಲ್ಲಬಹುದಾದ ಯುದ್ದ ಎಂದು ಬಿಜೆಪಿ ಕಾರ್ಯಕರ್ತರಿಗೆ ಗೊತ್ತಿದೆ. ರಾಜ್ಯದಲ್ಲಿ 28 ಕ್ಕೆ 28 ಸೀಟ್ ಗೆದ್ದು ಮೋದಿಜಿಯವರಿಗೆ ಅರ್ಪಿಸುತ್ತೇವೆ.

ಜೂನ್.4 ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನೀನು ನನ್ನ ಅಭ್ಯರ್ಥಿ ಸೋಲಿಸಿದೆ ಎಂದು ಪರಸ್ಪರ ಜಗಳವಾಡುತ್ತಾರೆ. ಇಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿಯೂ ಸೋಲುವುದಿಲ್ಲ‌ ಎಂದರು.

ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಗಾಳಿ ಬೀಸುತ್ತಿದೆ. ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುತ್ತಾರೆ. ಹೀಗಿರುವಾ ಡಿ.ಕೆ.ಶಿವಕುಮಾರ್ ಬೇರೆ ಯಾರನ್ನು ಗೆಲ್ಲಿಸುತ್ತಾರೆ? ಎಂದು ವ್ಯಂಗ್ಯವಾಡಿದರು.

ಕಳೆದ ಚುನಾವಣೆಯಲ್ಲಿ ಅವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಿದೆ. ಈ ಬಾರಿ ಅದರ ಹತ್ತುಪಟ್ಟು ಹಣ ಖರ್ಚು ಮಾಡಿದರೂ ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುವುದನ್ನು ತಪ್ಪಿಸಲು ಆಗಲ್ಲ ಎಂದರು.

ಈ ಬಾ ರಿ ಜನರು ಸಿ.ಎನ್.ಮಂಜುನಾಥ್ ಅವರ ಪರ ನಿಂತಿದ್ದಾರೆ. ಭಾರತೀಯ ಜನತಾ ಪಾರ್ಟಿ ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲ್ಲ. ಕಾಂಗ್ರೆಸ್‌ನೊಳಗೆ ವೈರುಧ್ಯಗಳಿವೆ, ಗುಂಪುಗಳ ನಡುವೆ ದ್ವೇಷವಿದೆ. ಅವರಿಗೆ ಬಿಜೆಪಿಗಿಂತಲೂ ಅವರವರ ನಡುವೆ ದ್ವೇಷವಿದೆ.

ಹೀಗಿರುವಾಗ ನಾವೇಕೆ ಸರ್ಕಾರವನ್ನು ಅಸ್ಥಿರಗೊಳಿಸೋಣ? ಚುನಾವಣೆ ನಂತರ ಸರ್ಕಾರವೇ ಪತನವಾಗಲಿದೆ. ಸಾಯುತ್ತಿರುವವರನ್ನು ಸಾಯಿಸುವ ಅಗತ್ಯ ನಮಗಿಲ್ಲ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪರಿಸ್ಥಿತಿ ಹದಗೆಡಲಿದೆ. ಸರ್ಕಾರ ಬೀಳಿಸಿದ ಕೆಟ್ಟ ಹೆಸರನ್ನು ಹೊರಲು ನಾವು ಸಿದ್ದರಿಲ್ಲ ಎಂದರು.