ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಟ್ಟು ಯುದ್ದದಲ್ಲಿ ಹೋರಾಡುತ್ತಾರೆ ಎಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಮೋಹನ್‌ದಾಸ್ ಅಗರ್ವಾಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾಸನದಲ್ಲಿ ಜೆಡಿಎಸ್ ನಿಂದ ಪ್ರಜ್ವಲ್ ಸ್ಪರ್ಧೆಗೆ ಪ್ರೀತಂಗೌಡ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಸನದಲ್ಲಿ ಬಿಜೆಪಿಯ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ ಎನ್ನುವುದು ತಪ್ಪು.
ನಮ್ಮ ಕಾರ್ಯಕರ್ತರು ಪೂರ್ತಿ ಶಕ್ತಿಯೊಂದಿಗೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನು ಕಾಯುತ್ತಾ ಇದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಐದು ಲಕ್ಷ ಮತಗಳು ಬಂದಿದ್ದವು. ಈ ಬಾರಿ ಜೆಡಿಎಸ್ ನ ಐದು ಲಕ್ಷ ಹಾಗೂ ಬಿಜೆಪಿಯ ಐದು ಲಕ್ಷ ಮತಗಳು ಸೇರಿ ಹತ್ತು ಲಕ್ಷ ಮತಗಳು ನಮಗೆ ದೊರೆಯಲಿವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳುವ ಅಧಿಕಾರ ಇರುತ್ತದೆ. ಆದರೆ ಅಭ್ಯರ್ಥಿ ಘೋಷಣೆ ಆಗುವ ಮುಂಚೆ ಆಡುವ ಮಾತುಗಳಿಗೆ ಮಹತ್ವ ಕೊಡಬೇಕಿಲ್ಲ. ಅಭ್ಯರ್ಥಿ ಅಂತಿಮವಾದ ನಂತರ ನಮ್ಮ ಕಾರ್ಯಕರ್ತರು ಏನು ಮಾಡುತ್ತಾರೆ ಅನ್ನೋದನ್ನು ನೋಡಬೇಕು ಎಂದರು.
ಬಿಜೆಪಿ ಕಾರ್ಯಕರ್ತರ ಭಾವನೆ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ತಲುಪಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಅನ್ನೋದನ್ನ ಬಿಜೆಪಿ ತೀರ್ಮಾನಿಸಲ್ಲ. ಅದನ್ನು ಜೆಡಿಎಸ್ ತೀರ್ಮಾನಿಸುತ್ತೆ ಎಂದರು.
ಜೆಡಿಎಸ್ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತದೆಯೋ ಅವರ ಪರವಾಗಿ ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡ್ತಾರೆ ಎಂದರು.