RCB ಸಂಭ್ರಮಾಚರಣೆ ಕಾಲ್ತುಳಿತ: ಇಂದು ಬೇಲೂರು ಸಮೀಪದ ಹುಟ್ಟೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ ಅಂತ್ಯಕ್ರಿಯೆ

ಹಾಸನ, ಜೂನ್ 05: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ಸಂಭವಿಸಿದ ದುರಂತ ಕಾಲ್ತುಳಿತ ಪ್ರಕರಣದಲ್ಲಿ ಹಾಸನ ಮೂಲದ ಯುವ ಇಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ (20) ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದಾಗಿ ಭೂಮಿಕ್‌ನ ಕುಟುಂಬ ಹಾಗೂ ಗ್ರಾಮದ ಜನತೆ ಆಘಾತಕ್ಕೊಳಗಾಗಿದ್ದಾರೆ.

 ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಡಿ.ಟಿ.ಲಕ್ಷ್ಮಣ ಮತ್ತು ಅಶ್ವಿನಿ ದಂಪತಿಯ ಏಕೈಕ ಪುತ್ರನಾದ ಭೂಮಿಕ್, ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷ್ಮಣ ಕುಟುಂಬ, ಅಲ್ಲಿ ಸಣ್ಣ ಕೈಗಾರಿಕೆಯನ್ನು ನಡೆಸುತ್ತಿದೆ.

ನಿನ್ನೆ ಕಾಲೇಜಿಗೆ ತೆರಳಿದ್ದ ಭೂಮಿಕ್, ನಂತರ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿದ್ದ. ಆದರೆ, ಅಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಿಲುಕಿ ದುರಂತಕ್ಕೀಡಾಗಿದ್ದಾರೆ. ಭೂಮಿಕ್‌ನ ಮೃತದೇಹವನ್ನು ಇಂದು ಅವರ ಹುಟ್ಟೂರಾದ ಕುಪ್ಪಗೋಡು ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.

ಇಂದು ಮಧ್ಯಾಹ್ನ ಕುಪ್ಪಗೋಡು ಗ್ರಾಮದಲ್ಲಿ ಭೂಮಿಕ್‌ನ ಅಂತ್ಯಕ್ರಿಯೆ ನಡೆಯಲಿದೆ. ಈ ದುರಂತದಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದ್ದು, ಸ್ಥಳೀಯರು ಮತ್ತು ಕುಟುಂಬದವರು ತೀವ್ರ ದುಃಖದಲ್ಲಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಕಾಲ್ತುಳಿತಕ್ಕೆ ಕಾರಣವಾದ ಸಂದರ್ಭಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.