ಪುತ್ರನ ಪರವಾಗಿ ಅಖಾಡಕ್ಕಿಳಿದ ಭವಾನಿ ರೇವಣ್ಣ; ಸಂಭಾವ್ಯ ಟ್ರಬಲ್ ತಪ್ಪಿಸಲು ಶಾಸಕ ಎ.ಮಂಜು ಭೇಟಿ

ಪಕ್ಷದ ಕಾರ್ಯಕ್ರಮಕ್ಕೆ ಗೈರಾಗಿದ್ದ ಎ.ಮಂಜು, ಕಾಂಗ್ರೆಸ್ ಕಡೆ ವಾಲುವ ವದಂತಿ ಹಿನ್ನೆಲೆಯಲ್ಲಿ ಮಹತ್ವದ ಭೇಟಿ

ಹಾಸನ : ಮಂಡಿ ಶಸ್ತ್ರಚಿಕಿತ್ಸೆ ನಂತರ ಎರಡು ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ತಮ್ಮ ಪುತ್ರನ ಪರವಾಗಿ ಪ್ರಚಾರದ ಅಖಾಡಕ್ಕಿಳಿದಿದ್ದಾರೆ.

ಅರಕಲಗೂಡಿನ ನಿವಾಸದಲ್ಲಿ ಶಾಸಕ ಎ.ಮಂಜು ಅವರನ್ನು ಪುತ್ರ, ಸಂಸದ ಪ್ರಜ್ವಲ್ ಜತೆಗೂಡಿ ಭೇಟಿ ಮಾಡಿದ ಭವಾನಿ ಅವರಿಗೆ ಹಾಸನ ಕ್ಷೇತ್ರದ ಶಾಸಕ ಸ್ವರೂಪ್ ಸಾಥ್ ನೀಡಿದರು.

ಎಚ್.ಡಿ‌.ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಕೆಲ ತಿಂಗಳ ಹಿಂದೆ ಎ.ಮಂಜು ಹೇಳಿಕೆ ನೀಡಿದ್ದರು.

ಅಲ್ಲದೆ ಕಳೆದ ಬುಧವಾರ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹಾಗೂ ಲೋಕಸಭಾ ಸದಸ್ಯರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಗೈರಾಗಿದ್ದರು.

ಕಾಂಗ್ರೆಸ್ ನಲ್ಲಿದ್ದಾಗ ಈಗ ಪಕ್ಷದ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಕುಟುಂಬಕ್ಕೆ ಎ.ಮಂಜು ಬೆಂಬಲವಾಗಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಅವರು ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಗೆ ಕೈಕೊಡಬಹುದು ಎನ್ನುವ ವದಂತಿ ಹರಡಿತ್ತು.

ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರ ಭೇಟಿ ಮಹತ್ವ ಪಡೆದಿದೆ. ತಮ್ಮ ಬಳಿ ಆಗಮಿಸಿದ ಎಲ್ಲರನ್ನೂ ಎ.ಮಂಜು ಸನ್ಮಾನಿಸಿ ಆದರಾತಿಥ್ಯ ತೋರಿದರು.

ಅರಕಲಗೂಡಿನಲ್ಲಿ ಕಾರ್ಯಕರ್ತರ ಸಭೆ ಆಯೋಜನೆಗೂ ಮುನ್ನ ಭವಾನಿ ಅವರ ಭೇಟಿ ಕುತೂಹಲ ಮೂಡಿಸಿದೆ