ಐಶ್ವರ್ಯಾ ಗೌಡ… ಶ್ವೇತಾ ಗೌಡ ಆಯ್ತು ಈಗ ವಂಚಕಿಯರ ಲಿಸ್ಟ್ ಗೆ ಹೊಸ ಎಂಟ್ರಿ ರೇಖಾ..! ಸಿಸಿಬಿ ಬಲೆಗೆ ಬಿದ್ದವಳು ಮಾಡಿದ್ದು ₹25 ಕೋಟಿ ಮೋಸ

ಬೆಂಗಳೂರು ಜ.28: ಸುಲಭದಲ್ಲಿ ಸಾಲ ಸಿಗತ್ತೆ ಅಂತಾ ತಗೊಳೋ ಮುನ್ನ ಕೊಂಚ ಹುಷಾರ್.. ಯಾಕಂದ್ರೆ ಕೋಟಿ ಕೋಟಿ ನಾಮ ಹಾಕೋರ ಲಿಸ್ಟ್ ನಲ್ಲಿ ಐಶ್ವರ್ಯ ಗೌಡ ಆಯ್ತು.. ಶ್ವೇತಾ ಗೌಡ ಆಯ್ತು.. ಈಗ ರೇಖಾ ಸರದಿ. ಸಾಲ ಕೊಡಿಸೋ‌ ನೆಪದಲ್ಲಿ ಹಲವು ಗಣ್ಯರಿಗೆ ಕೋಟ್ಯಂತರ ರೂಪಾಯಿ ನಾಮ‌‌ ಹಾಕಿರೋ ವಂಚಕಿ ರೇಖಾ ಆ್ಯಂಡ್ ಗ್ಯಾಂಡ್ ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಂಚನೆಗೆ ಈಕೆ ಮಾಡಿರೋ‌ ಪ್ಲಾನ್ ಕೇಳಿದ್ರೆ ಹೀಗೂ ಯಾಮಾರಿಸ್ಬೋದ ಅಂತಾ ನೀವೇ ಶಾಕ್ ಆಗ್ತೀರ. ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಇದೆ, ಅದನ್ನ ಡ್ರಾ ಮಾಡಲು ಐಟಿ, ಇಡಿ ಅಕೌಂಟ್ ಸೀಜ್ ಮಾಡಿದೆ. ಹೀಗಾಗಿ ತೆರಿಗೆ ಕಟ್ಟಲು ಒಂದು ಕೋಟಿ ರೂ. ಕೊಟ್ಟರೆ 5 ಕೋಟಿ ರೂ. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 25.75 ಕೋಟಿ ಪಡೆದು ವಂಚಿಸಿದ ಆರೋಪದಡಿ ರೇಖಾ, ಆಕೆಯ ಪತಿ ಮಂಜುನಾಥಾಚಾರಿ ಹಾಗೂ ಚೇತನ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ನಿಸಾರ್ ಅಹಮ್ಮದ್ ಎಂಬುವವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಗಳಲ್ಲಿ ರೇಖಾ ಸಾಲ ಕೊಡಿಸುತ್ತಿದ್ದಳು. ಈ ಬಗ್ಗೆ ತಿಳಿದು ಕೊಂಡಿದ್ದ ಉದ್ಯಮಿ ನಿಸಾರ್‌ ಈಕೆಯನ್ನು ಸಂಪರ್ಕಿಸಿ ಸಾಲ ಕೊಡಿಸುವಂತೆ ಕೇಳಿದ್ದರು.

ಆಗ ರೇಖಾ ಮತ್ತು ಸಹಚರರು ನಿಸಾರ್ ಅವರನ್ನು ವಂಚಿಸಲು ಸಂಚು ರೂಪಿಸಿ, ನಗರದಲ್ಲಿ 2010ರಲ್ಲಿ ನಡೆದ ಕಾರ್ಲಟನ್ ಟವರ್ ಅಗ್ನಿ ದುರಂತ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ನಾನು ಸಾಕ್ಷಿ ಹೇಳದಂತೆ ಕಾರ್ಲಟನ್ ಟವರ್ ಮಾಲೀಕರು ನನ್ನ ಖಾಸಗಿ ಅಕೌಂಟ್‌ಗೆ 25 ಕೋಟಿ ರು. ಹಣ ಹಾಕಿದ್ದಾರೆ. ಈ ಹಣ ಡ್ರಾ ಮಾಡಲು ನಾನು ತೆರಿಗೆ ಪಾವತಿಸಬೇಕು. ಹೀಗಾಗಿ ನೀವು 1 ಕೋಟಿ ರು. ಕೊಟ್ಟರೆ ನಾನು 5 ಕೋಟಿ ರು. ಕೊಡುವುದಾಗಿ ಆಮಿಷವೊಡ್ಡಿದ್ದಳು. ಇದನ್ನು ನಂಬಿದ ನಿಸಾರ್, ವಿವಿಧ ಹಂತಗಳಲ್ಲಿ ಆರೋಪಿಗಳಿಗೆ 5.75 ಕೋಟಿ ರು. ಹಣ ನೀಡಿದ್ದಾರೆ. ಬಳಿಕ ಯಾವುದೇ ಹಣ ನೀಡದೆ ರೇಖಾ ಮತ್ತು ಸಹಚರರು ವಂಚಿಸಿದಾಗ ನಿಸಾರ್ ಸಿಸಿಬಿಗೆ ದೂರು ನೀಡಿದ್ದರು.

ವಂಚಕಿ ರೇಖಾ ವಿರುದ್ದ ಈ ಹಿಂದೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ. 3 ವರ್ಷದ ಹಿಂದೆ ಮಾಜಿ ಸಚಿವ ರಾಜೂ ಗೌಡ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಳು. ಈ ಸಂಬಂಧ ಮಾಜಿ ಸಚಿವರು ನೀಡಿದ ದೂರಿನ ಮೇರೆಗೆ ಸುರಪುರ ಠಾಣೆ ಪೊಲೀಸರು ರೇಖಾಳನ್ನು ಬಂಧಿಸಿ ಜೈಲಿಗಟ್ಟಿದ್ದರು.

ಆ ಬಳಿಕ ಈಗ 2023ರಲ್ಲಿ ನಿಸಾರ್ ಪರಿಚಯದ ನಂತರ ಆತನಿಗ ಕಾರ್ಲ್ಟನ್ ಟವರ್ ಬೆಂಕಿ ದುರಂತದ ಕಥೆಯನ್ನು ಪೋಣಿಸಿ, ನಾನು ಕಾರ್ಲ್ಟನ್ ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ. ನಾನು ಸಾಕ್ಷಿ ಹೇಳದಂತೆ ಮಾಲೀಕರು 25 ಕೋಟಿ ರೂ. ಕೊಡ್ತಿದ್ದು, 6 ಕೋಟಿ ಹಣ ಖಾತೆಯಲ್ಲಿದೆ. ಆದರೆ ಈ ಹಣದ ಬಗ್ಗೆ ಮಾಹಿತಿ ತಿಳಿದು ಇಡಿ, ಐಟಿ ಅಕೌಂಟ್ ಸೀಜ್ ಮಾಡಿದೆ. ಈ ಹಣ ರಿಲೀಸ್ ಮಾಡಿಸಲು ಹಣ ಬೇಕಿದೆ ಅಂತ ಹೇಳಿ ಆ ಉದ್ಯಮಿಗೆ ಗಾಳ ಹಾಕಿದ್ಲು. ರೇಖಾ ಮಾತು ನಂಬಿ ಹಂತ ಹಂತವಾಗಿ 5.75 ಕೋಟಿ ರೂ.ಯನ್ನು ಉದ್ಯಮಿ ಆಕೆಗೆ ನೀಡಿದ್ದರು. ಆದರೆ ಯಾವುದೇ ಹಣ ವಾಪಸ್‌ ಕೊಡದೇ ರೇಖಾ ವಂಚನೆ ಮಾಡಿದ್ದಾಳೆ.

ಇದೇ ರೀತಿ ರೇಖಾ ಕಾರ್ಲ್ಟನ್ ಟವರ್ ಹೆಸರಲ್ಲಿ ಅನೇಕ ಜನರಿಗೆ ವಂಚನೆ ಮಾಡಿದ್ದಾಳೆ. ಈ ಹಿಂದೆ ರೇಖಾ ವಿರುದ್ದ ಮಾಗಡಿ ರೋಡ್ ನಲ್ಲಿ ವಂಚನೆ ಕೇಸ್ ಹಾಗೂ ಬಸವನಗುಡಿಯಲ್ಲಿ ಬ್ಲ್ಯಾಕ್‌ಮೇಲ್ ಕೇಸ್ ದಾಖಲಾಗಿತ್ತು. ಅದೇ ರೀತಿ‌ ರಾಜ್ಯದ ಅನೇಕ ಕಡೆ ರೇಖಾ ವಂಚನೆ ಜಾಲ ಪತ್ತೆಯಾಗ್ತಿದೆ.