ಬೇಲೂರು: ಪಟ್ಟಣದ ಗಾಂಧಿಬಜಾರ್‌ನಲ್ಲಿ ಹಳೇ ಕಟ್ಟಡದ ಸಜ್ಜಾ ಕುಸಿದು ಇಬ್ಬರು ಸಾವಿಗೀಡಾದ ದಾರುಣ ಘಟನೆಯ ಬಳಿಕ, ಸ್ಥಳೀಯ ಶಾಸಕರಾದ ಎಚ್.ಕೆ. ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, “ನಿಮ್ಮ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ” ಎಂದು ಆರೋಪಿಸಿದರು.
ಘಟನೆ ನಡೆದ ಸ್ಥಳದಲ್ಲಿ ಶೋಕದಲ್ಲಿ ಮುಳುಗಿದ್ದ ಜನರನ್ನು ಸಮಾಧಾನಪಡಿಸಿದ ಶಾಸಕರು, “ಈ ಕಟ್ಟಡ ಹಳೆಯದು ಎಂಬ ಮಾಹಿತಿ ನೀವು ಮುಂಚಿನಿಂದಲೇ ಹೊಂದಿದ್ದರೆ, ಮುನ್ನೆಚ್ಚರಿಕೆ ಏಕೆ ತೆಗೆದುಕೊಳ್ಳಲಿಲ್ಲ?” ಎಂದು ಪುರಸಭೆ ಮುಖ್ಯಾಧಿಕಾರಿ ಸುಜಯ್ ಹಾಗೂ ಪಿಡಬ್ಲ್ಯುಡಿ ಅಧಿಕಾರಿ ಕೃಷ್ಣಮೂರ್ತಿಯನ್ನು ತರಾಟೆಗೆ ತೆಗೆದುಕೊಂಡರು.

“ಪುರಸಭೆ ಸಭೆಯಲ್ಲಿ ಪುಟ್ಪಾತ್ ವ್ಯಾಪಾರವನ್ನು ನಿಷೇಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೂ ಈ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನೀವು ಹೇಗೆ ಅವಕಾಶ ನೀಡಿದಿರಿ?” ಎಂದು ಪ್ರಶ್ನಿಸಿದ ಶಾಸಕರು, “ಅಮಾಯಕರು ಹೊಟ್ಟೆಪಾಡಿಗೆ ಬಂದು ಸಜ್ಜಾ ಕೆಳಗೆ ಕುಳಿತು ವ್ಯಾಪಾರ ಮಾಡುತ್ತಿದ್ದರು. ನಿಮ್ಮ ನಿರ್ಲಕ್ಷ್ಯದಿಂದಲೇ ಬಡ ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.