ಬೇಲೂರು: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ

ಬೇಲೂರು:ತಾಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಮದ್ಯ ವ್ಯಸನಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೆಂಕಟೇಶ್ (55) ಆತ್ಮಹತ್ಯೆ ಮಾಡಿಕೊಂಡವರು. ಅವರು ಪ್ರತಿದಿನ ಮದ್ಯಪಾನ ಮಾಡುತ್ತಿದ್ದುದರಿಂದ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಈ ಹಿಂದೆ ಕೂಡಾ ಅವರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇದರಿಂದ ಪಾಠ ಕಲಿಯದೆ, ಕುಡಿತದ ಚಟ ಮುಂದುವರಿಸಿದರು.

ಕುಟುಂಬಸ್ಥರು ಕುಡಿಯಲು ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಯಗಚಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಬಗ್ಗೆ ಅರೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರು ಆಂಬುಲೆನ್ಸ್ ಸಿಬ್ಬಂದಿ ಚಂದ್ರು ಹಾಗೂ ಅಕ್ರಂ ಅವರ ನೆರವಿನಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.