ವಿಡಿಯೋ-ಬಿರುಗಾಳಿ ಸಹಿತ ಮಳೆ: ಸಾರಿಗೆ ಬಸ್‌ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಟ-ಪ್ರಯಾಣಿಕರ ಪ್ರಾಣ ಸಂಕಟ!

ಹಾಸನ:  ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗಗಳಲ್ಲಿ ಇಂದು ಸಂಜೆ ಬಿರುಗಾಳಿ ಸಹಿತ ಮಳೆ ಆರ್ಭಟಿಸಿದೆ. ಬಿರುಸಿನ ಗಾಳಿ, ಸಿಡಿಲು-ಗುಡುಗು, ಮತ್ತು ಮಳೆಯಿಂದ ಜನತೆ ತಕ್ಷಣ ಹಿತಕರ ವಾತಾವರಣ ಅನುಭವಿಸಿದರೂ, ಕೆಲವು ಕಡೆ ತೊಂದರೆಗಳು ಉಂಟಾಗಿವೆ.

ಚಾಲಕನ ಪರದಾಟ – ವೈಪರ್ ಇಲ್ಲದೆ ಬಸ್ ಚಾಲನೆ!

ಹಾಸನದಿಂದ ಬೆಂಗಳೂರು ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (KA-18-F-0913) ಮಳೆಯ ನಡುವೆ ವೈಪರ್ ಇಲ್ಲದೇ ಓಡಬೇಕಾದ ಪರಿಸ್ಥಿತಿ ಎದುರಿಸಿತು. ಬಸ್ ಚಾಲಕ ಮಳೆಯಿಂದ ಒಳಭಾಗದಲ್ಲಿ ಮೂಡುತ್ತಿದ್ದ ಮಂಜು ಹಾಗೂ ಹನಿಗಳನ್ನು ಕೈಯಿಂದ ಅಳಿಸುವ ಪ್ರಯತ್ನ ಮಾಡುತ್ತಿದ್ದರೆ, ಪ್ರಯಾಣಿಕರು ಆತಂಕಕ್ಕೆ ಒಳಗಾದರು. ವೈಪರ್ ಸ್ವಿಚ್ ಸರಿಯಾಗಿಲ್ಲದ ಕಾರಣ, ಚಾಲಕ ಮುಂದಿನ ದಾರಿಯು ಸ್ಪಷ್ಟವಾಗಿ ಕಾಣದೆ ತುಂಬಾ ಕಷ್ಟಪಟ್ಟರು.

ಪ್ರಯಾಣಿಕರ ಆಕ್ರೋಶ – ಟಿಕೆಟ್ ಹಣ ವಾಪಸ್ ಗೆ ಬೇಡಿಕೆ!

ಚನ್ನರಾಯಪಟ್ಟಣಕ್ಕೆ ಬಂದು ಬಸ್ ನಿಲ್ಲುತ್ತಿದ್ದಂತೆ, ಕೆಲವರು “ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಪ್ರಯಾಣ ಮಾಡಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಷ್ಟಕರ ಸ್ಥಿತಿಯಲ್ಲಿ ಬಸ್ ಸಾಗುತ್ತಿರುವುದರಿಂದ ಕೆಲವರು ಟಿಕೆಟ್ ವಾಪಸ್ ನೀಡುವಂತೆ ಒತ್ತಾಯಿಸಿದರು.

ನಿರ್ವಾಹಕರ ನಿರ್ಲಕ್ಷ್ಯ – ಬೇಸಿಗೆ ಆದ್ದರಿಂದ ಪರಿಶೀಲನೆ ಇಲ್ಲ!

ಬಸ್ ನಿರ್ವಾಹಕ “ಬೇಸಿಗೆ ಸೀಸನ್ ಆದ್ದರಿಂದ ಬಸ್‌ನ ವೈಪರ್ ಚೆಕ್ ಮಾಡಿಲ್ಲ” ಎಂಬ ಅಚ್ಚರಿಯ ಉತ್ತರ ನೀಡಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು. ಸಂಚಾರದ ಹೊತ್ತಿಗೆ ಬಸ್ ವೈಪರ್ ಸರಿಪಡಿಸದ ಕಾರಣ, ಮಳೆಯ ಮಧ್ಯೆ ಪ್ರಯಾಣ ಮುಂದುವರಿಸಬೇಕಾದ ಸ್ಥಿತಿಯು ಸೃಷ್ಟಿಯಾಯಿತು.