ಹಾಸನ: ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಮಾರ್ಫ್ ಮಾಡಿದೆ ಎಂದು ಆಪಾದಿಸಲಾದ ಅಶ್ಲೀಲ ಭಾವಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಪೂರ್ಣಚಂದ್ರ ತೇಜಸ್ವಿ ನೀಡಿದ ದೂರು ಆಧರಿಸಿ ಸಿಇಎನ್ ಠಾಣೆ ಪೊಲೀಸರು ಬೇಲೂರು ತಾಲೂಕಿನ ನವೀನ್ ಗೌಡ ಎನ್ನುವವರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ.
ಜೆಡಿಎಸ್ ಪಕ್ಷದ ಚುನಾವಣಾ ಏಜೆಂಟ್ ಆಗಿರುವ ಪೂರ್ಣಚಂದ್ರ ತೇಜಸ್ವಿ ಅವರು ನೀಡಿರುವ ದೂರಿನ ಸಾರಾಂಶ ಇಂತಿದೆ:
ಹಾಸನ ಲೋಕಸಭಾ ಕ್ಷೇತ್ರದ ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ.
ಕ್ಷೇತ್ರಕ್ಕೆ ಏ. 26 ರಂದು ಮತದಾನ ನಡೆಯಲಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಮತಹಾಕದಂತೆ ಜನರ ದಿಕ್ಕು ತಪ್ಪಿಸಲು ಅರೇಹಳ್ಳಿ ಹೋಬಳಿ ನಲ್ಕೆ ಗ್ರಾಮದ ನವೀನ್ ಗೌಡ ಹಾಗೂ ಇತರರು ಪ್ರಜ್ವಲ್ ರೇವಣ್ಣ ಅವರ ಮಾರ್ಫ್ ಮಾಡಿದೆ ಎಂದು ಆಪಾದಿಸಲಾದ ಅಶ್ಲೀಲ ಭಾವಚಿತ್ರಗಳು ಮತ್ತು ವಿಡಿಯೋಗಳನ್ನು ತಯಾರಿಸಿದ್ದಾರೆ.
ಅವುಗಳನ್ನು ಪೆನ್ ಡ್ರೈವ್, ಸಿಡಿ, ವಾಟ್ಸಪ್, ಮೊಬೈಲ್ ಗಳನ್ನು ಬಳಸಿ ಹಾಸನ ಲೋಕಸಭಾ ಕ್ಷೇತ್ರದ ಮನೆಮನೆಗೆ ತೆರಳಿ ಮತದಾರರಿಗೆ ತೋರಿಸುತ್ತಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ.
ಚುನಾವಣೆಯಲ್ಲಿ ನ್ಯಾಯಯುತ ಮತದಾನವಾಗುವುದನ್ನು ತಪ್ಪಿಸುವ ಸಲುವಾಗಿ ದುಷ್ಕೃತ್ಯವನ್ನು ಎಸಗುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೂರ್ಣಚಂದ್ರ ತೇಜಸ್ವಿ ಕೋರಿದ್ದಾರೆ.
ಈ ದೂರು ಆಧರಿಸಿ ಸಿಇಎನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
