ಚನ್ನರಾಯಪಟ್ಟಣ: ವಕ್ಫ್ ಹೆಸರಿಗೆ ನಮೂದಾಗಿರುವ ರೈತರ ಆಸ್ತಿ ವಿವಾದ ಸಮಸ್ಯೆಯನ್ನು ರಾಜ್ಯ ಸರ್ಕಾರ ಕೂಡಲೇ ಬಗೆಹರಿಸದಿದ್ದರೆ ಬೆಂಗಳೂರು ಚಲೋ ಚಳವಳಿ ಹಮಿಕೊಳ್ಳಲಾಗುವುದು ಎಂದು ಶಕ್ತಿ ಮಠದ ಪೀಠಾಧ್ಯಕ್ಷ ಬಸವೇಶ್ವರ ಚೈತನ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ವಕ್ಫ್ ಆಸ್ತಿಗೆ ಸಂಬಂಧಿಸಿ ಕೈಗೊಂಡಿರುವ ನಿರ್ಣಯ ಸರಿಯಾಗಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದರೆ ತಕ್ಷಣ ಪಹಣಿಯಲ್ಲಿ ಹೆಸರು ಬದಲಾಯಿಸಬೇಕು ಹಾಗು ಗೆಜೆಟ್ ನೋಟಿಫಿಕೇಶನ್ ಅನ್ನು ರದ್ದುಪಡಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆಗಾಗಿ ಅಡ್ಡದಾರಿ ಹಿಡಿದಿರುವುದು ಸರಿಯಲ್ಲ. ಕೆಲ ವಕ್‌್ಫ ಬೋರ್ಡ್‌ನ ಸದಸ್ಯರು ರೈತರ ಜಮೀನು ಮೇಲೆ ದೃಷ್ಟಿ ಹಾಯಿಸಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಮಸ್ಯೆ ಶೀಘ್ರ ಪರಿಹಾರ ಕಾಣದಿದ್ದರೆ ವಿಧಾನ ಸೌಧಕ್ಕೆ ಕಾಲ್ನಡಿಗೆ ಚಲೋ ಹಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್, ತಾಲ್ಲೂಕು ಅಧ್ಯಕ್ಷ ಗಂಗಾಧರ ಪರಮ, ರೈತ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ, ದಲಿತ ಮುಖಂಡ ಬಸರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ಧರಣಿ ನಾಗೇಶ್, ಮಂಡಲದ ಕಾರ್ಯದರ್ಶಿ ನಾಗೇಶ್ ಹಿರೇಬಿಳಿ ಇದ್ದರು.