ಮೇಲ್ಮನೆ ಸದಸ್ಯರ ನಡವಳಿಕೆ ಬಗ್ಗೆ ಕಳವಳ- ಸದನದ ಸ್ಥಿತಿ ಸುಧಾರಿಸದಿದ್ದರೆ ರಾಜೀನಾಮೆ: ಬಸರಾಜ ಹೊರಟ್ಟಿ

ಹಾಸನ: ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಸದನದ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ,“ಸದನ ಒಂದು ದೊಡ್ಡ ದೇವಸ್ಥಾನದಂತೆ, ಆದರೆ ಹನಿಟ್ರ್ಯಾಪ್‌ನಂತಹ ಘಟನೆಗಳು ತಲೆ ತಗ್ಗಿಸುವಂತಹ ವಿಷಯ. ಇದರಿಂದ ಯಾರಿಗೆ ಒಳ್ಳೆಯದಾಗುತ್ತೆ? ಹನಿಟ್ರ್ಯಾಪ್ ಮಾಡಿದವನು ಒಳ್ಳೆಯವನಲ್ಲ, ಮಾಡಿಸಿಕೊಂಡವನೂ ಒಳ್ಳೆಯವನಲ್ಲ,” ಎಂದರು.

ಸಕಲೇಶಪುರಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ಈಚೆಗೆ ಅನಾವರಣಗೊಂಡ ಕೆಂಪೇಗೌಡ ಪ್ರತಿಮೆ ಸ್ಥಳದಲ್ಲಿ ಕೆಲ ಸಮಯ ಕಳೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಪ್ರಜಾಪ್ರಭುತ್ವದ ಮೌಲ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದ ಹೊರಟ್ಟಿ, “ಹಿಂದಿನ ರಾಜಕಾರಣ ಮತ್ತು ಈಗಿನ ರಾಜಕಾರಣದಲ್ಲಿ ಬಹಳ ಅಂತರವಿದೆ. ಜನ ಸುಧಾರಣೆ ಆಗಿದ್ದಾರೆ, ಅತೀ ಸುಧಾರಣೆ ಆಗಿದ್ದಾರೆ; ಆದರೆ ಅದು ಒಳ್ಳೆಯದಲ್ಲ. ದುಡ್ಡು ಕೊಟ್ಟು ಗೆದ್ದು ಬಂದು, ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡಿ, ಮತ್ತೆ ದುಡ್ಡು ಖರ್ಚು ಮಾಡಿ ಆರಿಸಿಕೊಳ್ಳುವ ಪರಿಪಾಠ ಇದೆ. ಎಲ್ಲಿಯವರೆಗೆ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆಯೋ, ಅಲ್ಲಿಯವರೆಗೆ ಪ್ರಜಾಪ್ರಭುತ್ವ ಕೇಳುವವರು ಇರುವುದಿಲ್ಲ,” ಎಂದು ವಿಷಾದಿಸಿದರು.

ಸದನದಲ್ಲಿ ಶಾಸಕರ ವರ್ತನೆಯ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು. “ಸದನಕ್ಕೆ ಕಾಲಿಟ್ಟರೆ ಎಲ್ಲರೂ ಶಾಸಕರೇ, ವಯಸ್ಸಿಗೆ ಸಂಬಂಧವಿಲ್ಲ. ಆದರೆ ಅನುಭವಿಗಳು ಹೇಳಿದ್ದನ್ನು ಕೇಳುವುದಿಲ್ಲ. ಯಾರಿಗೂ ಯಾರ ಹೆದರಿಕೆ ಇಲ್ಲ,  ‘ದುಡ್ಡು ಕೊಟ್ಟು ಆರಿಸಿ ಬರುತ್ತೇನೆ’ ಎಂಬ ಭಾವನೆ ಇದೆ. ಇನ್ನೊಂದೆಡೆ ಜಾತಿ ವ್ಯವಸ್ಥೆಯೂ ಇದೆ,” ಎಂದರು.

ಎಲ್ಲಾ ಶಾಸಕರಿಗೂ ತರಬೇತಿ ನೀಡಬೇಕು ಎಂದು ಸಲಹೆ ನೀಡಿದ ಅವರು, “ವಿರೋಧ ಪಕ್ಷದ ನಾಯಕರು ಸಭಾಧ್ಯಕ್ಷರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಮಕ್ಕಳಿಗೆ ತರಬೇತಿ ಕೊಡುವಂತೆ ಶಾಸಕರಿಗೂ ತರಬೇತಿ ಕೊಡಬೇಕು,” ಎಂದರು.ಕರ್ನಾಟಕದ ಸದನವನ್ನು ದೇಶಕ್ಕೆ ಮಾದರಿಯಾಗಿ ಮಾಡುವ ಗುರಿ ತಮ್ಮದು ಎಂದು ಹೇಳಿದ ಹೊರಟ್ಟಿ, “ಆದರೆ ಸದನವನ್ನು ಪುನರ್ವಸತಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಬಜೆಟ್ ಮತ್ತು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಸಮಯ ಕೊಟ್ಟಿದ್ದೆ. ಆದರೆ ಅದನ್ನು ಬಿಟ್ಟು ಹನಿಟ್ರ್ಯಾಪ್ ಮುಖ್ಯ ಎಂದು ಗಲಾಟೆ ಮಾಡಿದರು. ಇದು ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

“ಈಗಾಗಲೇ ಎಲ್ಲಾ ಪಕ್ಷದ ಶಾಸಕರನ್ನು ಕರೆದು ಸಭೆ ಮಾಡಿದ್ದೇನೆ. ನಮ್ಮ ವಿಧಾನ ಪರಿಷತ್‌ನ್ನು ದೇಶಕ್ಕೆ ಮಾದರಿಯಾಗಿ ಮಾಡಲು ನಿರ್ಧರಿಸಿದ್ದೇನೆ. ಎಲ್ಲರೂ ತಿದ್ದಿಕೊಳ್ಳುತ್ತೇವೆ ಎಂದು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಮೌಲ್ಯಗಳು ಕುಸಿತವಾಗಿವೆ. ಪ್ರಶ್ನೆ ಕೇಳಿ ಮನೆಗೆ ಹೋಗುತ್ತಾರೆ, ಮುಖ್ಯ ವಿಚಾರಗಳು ಚರ್ಚೆಯಾಗುವುದಿಲ್ಲ. ಇದರಿಂದ ಬೇಸರವಾಗಿದೆ. ಮತ್ತೆ ಸಭೆ ಕರೆಯುತ್ತೇನೆ,” ಎಂದರು.

“ಸಭಾಪತಿಯ ಪೀಠದ ಮೇಲೆ ಕುಳಿತುಕೊಳ್ಳುವುದು, ಮುಖದ ಮೇಲೆ ಪೇಪರ್ ಎಸೆಯುವುದು ಒಳ್ಳೆಯದಲ್ಲ. ಸಭಾಪತಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ, ಅವರಿಗೆ ಗೌರವ ಕೊಡಬೇಕು,” ಎಂದು ಹೇಳಿದ ಅವರು, ಈ ಪರಿಸ್ಥಿತಿ ಮುಂದುವರಿದರೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮುಂತಾದವರಿದ್ದರು.