ಕೆಲವರು ತಮ್ಮ ಪಕ್ಷವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಸಂಘಟನೆ ಮಾಡಿಕೊಳ್ಳಲು ಎನ್.ಡಿ.ಎ.ಗೆ ಬಂದಿದ್ದಾರೆ; ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಿದ್ದೇಶ್ ನಾಗೇಂದ್ರ

ಯಾರೂ ಪ್ರೀತಂಗೌಡರ ಸಮಾಧಿ ಕಟ್ಟಲು ಸಾಧ್ಯವಿಲ್ಲ. ಅವರು ಸಂದರ್ಭವನ್ನು ಉಪಯೋಗಿಸಿಕೊಂಡಿದ್ದಾರೆ ಅಷ್ಟೇ

ಹಾಸನ: ರಾಷ್ಟ್ರಮಟ್ಟದಲ್ಲಿ ನಲವತ್ತು ಪಕ್ಷಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದಾರೆ. ಕೆಲವರು ದೇಶಕ್ಕಾಗಿ, ಮೋದಿಯವರ ಪ್ರಭಾವಕ್ಕೆ ಒಳಗಾಗಿ ಬಂದಿದ್ದರೆ ಇನ್ನೂ ಕೆಲವರು ಅವರ ಅಸ್ತಿತ್ವಕ್ಕಾಗಿ, ಉಳಿವಿಗಾಗಿ ಬಂದು ಸೇರಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮೈತ್ರಿ ಪಕ್ಷ ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಎಂಟು ತಿಂಗಳ ಹಿಂದೆ ಪ್ರೀತಂಗೌಡ ಅವರಿಗೆ ಆಗಿರುವ ಅನ್ಯಾಯವನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗಿಲ್ಲ. ಅಷ್ಟರಲ್ಲಿ ಕೆಲವರು ಅವರ ಪಕ್ಷವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಸಂಘಟನೆ ಮಾಡಿಕೊಳ್ಳಲು ಬಂದಿದ್ದಾರೆ ಎಂದು ಕುಟುಕಿದರು.

ಈ ಬಾರಿ 400 ಕ್ಕೂ ಹೆಚ್ಚು ಸಂಸದರನ್ನು ಕಳುಹಿಸಿ ಕೊಡಬೇಕು. ಇಲ್ಲಿ ಪ್ರೀತಂಗೌಡ ಅವರಿಗೆ ಹಿನ್ನಡೆ ಆಗಿದೆ. ಆದರೆ ಅವರು ಎಡ-ಬಲಕ್ಕೆ ಇಬ್ಬರು ಶಾಸಕರನ್ನು ಗೆಲ್ಲಿಸಿದ್ದಾರೆ. ಬೇಲೂರು ಹಾಲಿ ಶಾಸಕರು ಹಾಸನದಲ್ಲಿ ಎರಡು ಬಾರಿ,‌ ಒಂದು ಬಾರಿ ಬೇಲೂರಿನಲ್ಲಿ ನಿಂತರೂ ವಿಫಲರಾಗಿದ್ದರು. ಆದರೆ ಪ್ರೀತಂಗೌಡ ಬಂದು ಬಿಜೆಪಿಗೆ ಭದ್ರ ಬುನಾದಿ ಹಾಕಿದರು. ಆಮೇಲೆ ಸುರೇಶ್ ಅವರು ಶಾಸಕರಾಗಿ ಆಯ್ಕೆಯಾದರು ಎಂದರು.

ಪ್ರೀತಂಗೌಡರನ್ನು ಶಾಸಕರನ್ನಾಗಿ ಕಳೆದುಕೊಂಡಿರಬಹುದು. ಆದರೆ ಪಕ್ಷ ಸಂಘಟನೆಗೆ ಅವರ ಶಕ್ತಿ ಸಿಕ್ಕಿದೆ. ಕೆಲವರು ಅನ್ಯ ಪಕ್ಷದ ನಾಯಕರು ಮಾತನಾಡಿದ ಧಾಟಿ ನೋಡಿದ್ದೇವೆ. ಯಾರೂ ಪ್ರೀತಂಗೌಡರ ಸಮಾಧಿ ಕಟ್ಟಲು ಸಾಧ್ಯವಿಲ್ಲ. ಅವರು ಸಂದರ್ಭವನ್ನು ಉಪಯೋಗಿಸಿಕೊಂಡಿದ್ದಾರೆ ಅಷ್ಟೇ ಎಂದರು.

ಸಮನ್ವಯ ಸಮಿತಿ ನಡೆಯಿತು ಆಗ ಹಾಸನದವರು ಯಾರೂ ಕಾಣಲಿಲ್ಲ. ಆದರೆ ಹಾಸನಕ್ಕೆ ವಿಶೇಷವಾದ ಸಮನ್ವಯ ಸಭೆ ಮಾಡುವ ಮಟ್ಟಕ್ಕೆ ಹೋಗಿದೆ. ಮಾಧ್ಯಮದಲ್ಲಿ ಪ್ರೀತಂಗೌಡರಿಗೆ ಕಟ್ಟೆಚ್ಚರ ಕೊಟ್ಟಿದ್ದಾರೆ ಅಂತ ಬಂತು. ಆದರೆ ಪ್ರೀತಂಗೌಡರು ಸೂಚನೆ, ಕಟ್ಟೆಚ್ವರ ಕೊಡುವ ರೀತಿ ಅವರು ನಡೆದುಕೊಂಡಿಲ್ಲ. ಮೈತ್ರಿಕೂಟದ ಪಕ್ಷದವರಿಗೂ ಈ ಸಭೆ ಬಗ್ಗೆ ತಿಳಿಸಿದ್ದೇವೆ ಎಂದರು.

ನಮ್ಮ ಕುಟುಂಬದವರ ಜತೆ ಸಭೆ ಮಾಡುತ್ತೇವೆ ಎಂದು ಹೇಳಿದ್ದೇವೆ. ನಾಳೆ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಆಗಮಿಸಲಿದ್ದಾರೆ. ನಮ್ಮ ಮನೆಯ ಯಜಮಾನರು ಆಗಮಿಸಲಿದ್ದಾರೆ. ಅವರನ್ನು ಹೇಗೆ ನಡೆಸಿಕೊಳ್ಳಬೇಕು, ಸ್ವಾಗತ ಮಾಡಬೇಕು ಎಂದು ಚರ್ಚಿಸಲು ಈ ಸಭೆ ಕರೆದಿದ್ದೇವೆ.

ನಮ್ಮ ನಾಯಕರ ಗೌರವ, ಸ್ವಾಭಿಮಾನ ಧಕ್ಕೆ ತರವಂತೆ ನಡೆದುಕೊಳ್ಳಬಾರದು. ನಿಮ್ಮನ್ನು ಇನ್ನೊಬ್ಬರ ಮನೆಗೆ ಇಪ್ಪತ್ತು ದಿನಕ್ಕೆ ಲೀಸ್‌ಗೆ ಕಳುಹಿಸಲು ನಾವು ಬಂದಿಲ್ಲ.ನೀವು ಸುಮ್ಮನಿದ್ದರೂ ಅವರು ನಿಮ್ಮ ಮನೆಗೆ ಬಂದಿದ್ದಾರೆ. ಕೆಲವರು ಇದ್ದು ಇಲ್ಲಾ ಅನ್ನಿಸಿಕೊಂಡಿದ್ದೀರಿ. ಕೆಲವರು ಮೊದಲೇ ಕಾಣಿಸಿಕೊಂಡಿದ್ದಾರೆ. ಸಮನ್ವಯ ‌ಸಮಿತಿ ಇನ್ನೆರಡು ದಿನಗಳಲ್ಲಿ ರಚನೆಯಾಗಲಿದೆ.

ನಾವು ಈಗ ಏನು ಮಾಡಬೇಕು ಎಂಬುದು ಬಿಜೆಪಿಯ ಕಟ್ಟಾಳುಗಳಿಗೆ ಗೊತ್ತು. ನಾವು ಮೈತ್ರಿ ಧರ್ಮವನ್ನು ಪಾಲಿಸಬೇಕು. ನರೇಂದ್ರಮೋದಿ ಅವರನ್ನು ಸದೃಢ ಮಾಡಬೇಕಿದೆ. ಪಕ್ಷದ ಹಿರಿಯರು ಮಾರ್ಗಸೂಚಿಗಳನ್ನು ತೀರ್ಮಾನ ಮಾಡುತ್ತಾರೆ. ನಾವೆಲ್ಲರೂ ಪ್ರೀತಂಗೌಡರ ಧ್ಚನಿಯಾಗಿದ್ದೇವೆ ಎಂದರು.

ಕಡೂರು ಸೇರಿ ನಮ್ಮ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷದ 26,559 ಹಿರಿಯ ನಾಗರಿಕರಿದ್ದಾರೆ ಎಂದರು.