ರೇವಣ್ಣ ನನ್ನನ್ನು ಮುಗಿಸಿಬಿಡ್ತಾನೆ ಎಂದ ಎ.ಮಂಜು!

ಹಾಸನ: ಹಾಸನ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದಲ್ಲಿ ಜೆಡಿಎಸ್-ಬಿಜೆಪಿ ಜಂಟಿ ಪ್ರಚಾರ ಸಭೆಯಲ್ಲಿ ಮಾಜಿಸಚಿವ ಎ.ಮಂಜು ತಮ್ಮ ಭಾಷಣದುದ್ದಕ್ಕೂ ನಗುನಗುತ್ತಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕಾಲೆಳೆದರು.

ಸ್ವಾಗತ ಮಾಡುವಾಗಲೇ ಮುಂದಿನ ಕೇಂದ್ರ ಸಚಿವರಾದ ಎಚ್.ಡಿ‌.ಕುಮಾರಸ್ವಾಮಿ ಅವರೇ ಎಂದ ಎ.ಮಂಜು ಮಾತು ನಂತರ ರೇವಣ್ಣ ಅವರ ಕಡೆಗೆ ತಿರುಗಿತು.

ಮಾಜಿಸಚಿವ ಎಚ್.ಡಿ.ರೇವಣ್ಣ ಅವರನ್ನು ಕಿಚಾಯಿಸಿದ ಅವರು, ಅಭಿವೃದ್ಧಿ ಹರಿಕಾರ, ಎಲ್ಲರಿಗಿಂತ ಹೆಚ್ಚು ಕೆಲಸ ಮಾಡುವ, ಹಾಸನ, ಹೊಳೆನರಸೀಪುರಕ್ಕೆ ಮಾತ್ರ ಕೆಲಸ ಮಾಡಿಕೊಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೇ ಎಂದು ಸಂಭೋದಿಸಿದರು.

ನಾನು ರೇವಣ್ಣ ಈಗ ಒಂದಾಗಿದ್ದೇವೆ, ನಾನು ಪ್ರಜ್ವಲ್‌ ಒಂದಾಗ್ತಿವಿ ಅಂತ ನೀವ್ಯಾರು ಅಂದುಕೊಂಡಿರಲಿಲ್ಲ. ರೇವಣ್ಣ ಅವರೇ ನಾವು ಕುಮಾರಸ್ವಾಮಿ ಅವರನ್ನು ಇಟ್ಕಂಡು ಕೆಲಸ ಮಾಡ್ಕತೀವಿ ನೀವು ಸುಮ್ನೆ ಇದ್ದುಬಿಡಿ ಎಂದು ತಿವಿದರು.

ನೀವು ಸಚಿವರಾದಾಗ ಹೊಳೆನರಸೀಪುರಕ್ಕೆ ಬಾಯ್ಸ್ ಡಿಪ್ಲೊಮಾ ಕಾಲೇಜು, ಗರ್ಲ್ಸ್ ಡಿಪ್ಲೊಮಾ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಎಲ್ಲಾ ಮಾಡಿದ್ರಿ. ಆಗ ಕಣ್ಣು ಕಾಣಲಿಲ್ಲವಾ ನಿಮಗೆ ಎಂದು ನಗುತ್ತಲೆ ಮಾತಿನಲ್ಲೇ ಟಾಂಗ್ ನೀಡಿದರು.

ಮಾಗಡಿಗೆ ಹೋಗುವ ರೋಡ್ ಮಾಡಿದ್ದು ನಾನು ಅಂದರು, ಆದರೆ ಅದನ್ನು ಮಾಡಿದ್ದು ನಾನು ಸಚಿವನಾಗಿದ್ದಾಗ. ಸುಳ್ಳು ಹೇಳಿಯೇಬಿಟ್ಟರು, ಜನ ನೋಡ್ತಾವ್ರೆ ಏನ್ ಹಿಂಗ್ ಸುಳ್ಳು ಹೇಳ್ತಾವ್ನೆ ಅಂತಾರೆ ಎಂದ ಎ.ಮಂಜು ಮಾತಿಗೆ ನಗುತ್ತ ಕುಳಿತ ಎಚ್.ಡಿ.ರೇವಣ್ಣ ಬೇರೇನೂ ಪ್ರತಿಕ್ರಿಯೆ ನೀಡಲಿಲ್ಲ.

ನೀವು ಪ್ರಜ್ವಲ್‌ರೇವಣ್ಣ ಅವರಿಗೆ ಮತ ಹಾಕಿ ಹೆಚ್ಚು ಲೀಡ್ ಕೊಡಬೇಕು. ಇಲ್ಲಾ ಅಂದರೆ ರೇವಣ್ಣ ಬಿಡಲ್ಲ ನನ್ನ ಮುಗಿಸಿಬಿಡ್ತಾನೆ. ಕುಮಾರಣ್ಣ ಅವರು ಕೇಂದ್ರ ಸಚಿವರಾಗುತ್ತಾರೆ. ಅದಾದ ಮೇಲೆ ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದನ್ನ ಕಾದುನೋಡಿ ಎಂದರು.