ಹಿಟ್ ಅಂಡ್ ರನ್‌ಗೆ ಮಾವ-ಅಳಿಯ ಬಲಿ; ಕಾರಿನ ಟೈರ್ ಬದಲಿಸುತ್ತಿದ್ದಾಗ ಗುದ್ದಿದ ಟ್ಯಾಂಕರ್ ಲಾರಿ

ಹಾಸನ; ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಕಾರಿಗೆ  ಹಿಂದಿನಿಂದ ಬಂದ ಟ್ಯಾಂಕರ್ ಲಾರಿ ಗುದ್ದಿದ್ದರಿಂದ ಮಾವ-ಅಳಿಯ ಬಲಿಯಾಗಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಶೆಟ್ಟಿಹಳ್ಳಿ ಬೈಪಾಸ್ ನಲ್ಲಿ ನಡೆದಿದೆ.

ಅರಸೀಕೆರೆ ತಾಲ್ಲೂಕಿನ, ನಾಗೇನಹಳ್ಳಿ ಗ್ರಾಮದ ಮಧು (35), ಬೇಲೂರು ತಾಲ್ಲೂಕಿನ, ದೇವಿಹಳ್ಳಿ ಗ್ರಾಮದ ಜವರಯ್ಯ (65) ಮೃತ ದುರ್ದೈವಿಗಳು.

ಮಧು ಆಟೋಮೊಬೈಲ್ ಶಾಪ್ ಇಟ್ಟುಕೊಂಡಿದ್ದು ಬೆಂಗಳೂರಿನಿಂದ ಅಂಗಡಿಗೆ ವಸ್ತುಗಳನ್ನು ಖರೀದಿ ಮಾಡಿಕೊಂಡು KA-35 M-2916 ನಂಬರ್‌ನ ಟಾಟಾ ಇಂಡಿಕಾ ಕಾರಿನಲ್ಲಿ ಮಾವ ಜವರಯ್ಯ, ಪತ್ನಿ ಗೀತಾ ಜೊತೆ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು.

ಶೆಟ್ಟಿಹಳ್ಳಿ ಬೈಪಾಸ್ ಬಳಿ ಕಾರಿನ ಟೈರ್ ಪಂಕ್ಚರ್ ಆಗಿದ್ದು, ರಸ್ತೆಯಲ್ಲಿಯೇ ಕಾರು ನಿಲ್ಲಿಸಿಕೊಂಡು ಟೈರ್ ಚೇಂಜ್ ಮಾಡುತ್ತಿದ್ದರು.

ಈ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದು ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಜವರಯ್ಯ ಅವರಿಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆ ತರುತ್ತಿದ್ದ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಮಧು ಅವರ ಪತ್ನಿ ಗೀತಾ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಟ್ಯಾಂಕರ್ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದು, ಡಿಕ್ಕಿ ರಭಸಕ್ಕೆ ಮಧು ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.