ಮುಂದಿನ ವರ್ಷ ಹತ್ತೇ ದಿನ ದರ್ಶನ, ಮರೆಗೆ ಸರಿದ ಹಾಸನಾಂಬೆ, ಮಧ್ಯಾಹ್ನ 12.23ಕ್ಕೆ ಮುಚ್ಚಿದ ಗರ್ಭಗುಡಿ ಬಾಗಿಲು

ಲಕ್ಷಾಂತರ ಮಂದಿಗೆ ಅನುಗ್ರಹ ಕರುಣಿ ಸಿದ ತಾಯಿಗೆ ಭಕ್ತರ ಜೈಕಾರ!

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣ ಸುವ ಹಾಸನದ ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನನೋತ್ಸವಕೆ ಇಂದು ವಿಧ್ಯುಕ್ತವಾಗಿ ತೆರೆ ಬಿದ್ದಿತು. ಮಧ್ಯಾಹ್ನ ೧೨.೨೩ಕ್ಕೆ ಸರಿಯಾಗಿ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.

ಈ ಕ್ಷಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ ಸಿ., ಜಿಪಂ ಸಿಇಒ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಎಸಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮೊದಲಾದವರಿದ್ದರು.

ಹೊಸ ಸಂಪ್ರದಾಯಕ್ಕೆ ನಾಂದಿ:
ಪ್ರತಿ ವರ್ಷ ಹಾಸನಾಂಬೆ ದೇವಿಯ ಬಾಗಿಲು ತೆರೆಯುವ ಮೊದಲ ದಿನ ಹಾಗೂ ಬಾಗಿಲು ಮುಚ್ಚುವ ಕಡೆಯ ದಿನ ಸಾರ್ವಜನಿಕ ದರ್ಶನ ಇಲ್ಲ ಎಂದು ಹೇಳಿದ್ದರೂ, ಬಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು.

ಆದರೆ ಇದೇ ಮೊದಲ ಬಾರಿಗೆ ಮೊದಲ ದಿನ ಎಂದಿನಂತೆ ದರ್ಶನ ಅವಕಾಶ ನೀಡದ ಜಿಲ್ಲಾಡಳಿತ ಇಂದು ಹಾಜರಿದ್ದ ಬೆರಳೆಣಿಕೆಯಷ್ಟು ಭಕ್ತರು ದೇವಿ ದರ್ಶನ ಇಲ್ಲದೆ ಮರಳುವಂತೆ ಮಾಡಿತು.

ದರ್ಶನ ಸಿಗದ ಭಕ್ತರು

ಇದರಿಂದ ನೊಂದ ಅನೇಕ ಭಕ್ತರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದರು. ಕೆಲವರು ಆಕ್ರೋಶ ಹೊರ ಹಾಕಿದರು, ಇನ್ನೂ ಕೆಲವರು ಭಾವುಕರಾಗಿ ಕಣ್ಣೀರಿಟ್ಟರು. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಾನೂ, ಡಿಸಿ ಹಾಗೂ ಶಾಸಕರು ಹೊಸಬರು, ನಾವೆಲ್ಲರೂ ಇರುವ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಿ ಎಂದು ಕೇಳಿದೆವು. ಆದರೆ ಅರ್ಚಕರು ನಮ್ಮ ಪದ್ಧತಿ ಆಚರಣೆಗೆ ಅಡಚಣೆಯಾಗಲಿದೆ ಎಂಬ ಕಾರಣಕ್ಕೆ ದರ್ಶನ ಮಾಡಿರಲಿಲ್ಲ ಎಂದರು.
14 ಲಕ್ಷ ಭಕ್ತರ ಆಗಮನ:
ವಿಶೇಷ ಎಂದರೆ ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ದಾಖಲೆಯ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.
ಹೌದು; ಬರೋಬ್ಬರಿ ೧೪ ಲಕ್ಷದ ೨೦ ಸಾವಿರ ಭಕ್ತರು ಜಿಲ್ಲೆ, ರಾಜ್ಯ ಹಾಗೂ ವಿವಿಧೆಡೆಗಳಿಂದ ಆಗಮಿಸಿ ಅಮ್ಮನನ್ನು ಎದುರುಗೊಂಡಿದ್ದಾರೆ.ಕ ಳೆದ ವರ್ಷ ಸುಮಾರು ೬ ಲಕ್ಷ ಭಕ್ತರು ದೇವೆಯ ದರ್ಶನ ಪಡೆದಿದ್ದರು.

ಹೊಸ ದಾಖಲೆ ಬರೆದ ಆದಾಯ:
ಈ ಬಾರಿಗೆ ಅತಿ ಹೆಚ್ಚು ಭಕ್ತರು ಆಗಮಿಸಿರುವುದು ಒಂದೆಡೆಯಾದರೆ, ಆದಾಯವೂ ದುಪ್ಪಟ್ಟಾಗಿದೆ. ನ.2 ರಿಂದ ನ.15ರ ಬೆಳಗ್ಗೆ ವರೆಗೆ ದೇವಾಲಯಕ್ಕೆ ದಾಖಲೆಯ ಆದಾಯ ಹರಿದುಬಂದಿದೆ.
ಈ ಬಾರಿ ಹಿಂದೆಗಿಂತಲೂ ಬರೋಬ್ಬರಿ 6,15,17,160 ರೂ. ಆದಾಯ ದೇವಾಲಯದ ಖಾತೆ ಸೇರಿದೆ.
ಇದರಲ್ಲಿ 1೦೦೦ ರೂ. ಮೌಲ್ಯದ ಟಿಕೆಟ್ ಮಾರಾಟದಲ್ಲಿ 3.೦9 ಕೋಟಿ ಆದಾಯ ಬಂದಿದ್ದರೆ, 3೦೦ ರೂ. ಮುಖಬೆಲೆಯ ಟಿಕೆಟ್ ಮಾರಾಟದಿಂದ 2.35 ಕೋಟಿ ಹಾಗೂ ಲಾಡು ಪ್ರಸಾದ ಮಾರಾಟದಿಂದ 7೦.23 ಲಕ್ಷ ಆದಾಯ ಹರಿದುಬಂದಿದೆ.
ಗುರುವಾರ ಬೆಳಗ್ಗೆಯಿಂದ ಹುಂಡಿ ಎಣಿಕೆ ಕಾರ್ಯ ಆರಂಭವಾಗಲಿದ್ದು, ಅದು ಮುಗಿದ ನಂತರ ಆದಾಯದ ಪ್ರಮಾಣ ಅಂದಾಜು ೧೦ ಕೋಟಿ ರೂ. ತಲುಪುವ ನಿರೀಕ್ಷೆ ಇದೆ.

ಯಾರಿಗೂ ನೋವು ಕೊಡೋ ಉದ್ದೇಶ ಇಲ್ಲ:
ಗರ್ಭಗುಡಿ ಬಾಗಿಲು ಮುಚ್ಚಿದ ನಂತರ ಮಾತನಾಡಿದ ಸಚಿವ ರಾಜಣ್ಣ, ಪದ್ಧತಿಗೆ ಅಪಚಾರ ಆಗಬಾರದು ಎಂದು ಬಾಗಿಲು ಬಂದ್ ಮಾಡಲಾಯಿತು ಎಂದರು.

ಶಾಸಕರಾದಿಯಾಗಿ ಎಲ್ಲರೂ ಇರುವವರಿಗೆ ದರ್ಶನ ಮಾಡಿಸಿ ಎಂದು ಕೇಳಿಕೊಂಡೆವು. ಎಸಿ ಅವರೂ ಮನವಿ ಮಾಡಿದರು. ವಿಪರ‍್ಯಾಸ ಎಂದರೆ ನಮ್ಮನ್ನೇ ಗರ್ಭಗುಡಿ ಒಳಗೆ ಬಿಡಲಿಲ್ಲ. ಹೊರಗಡೆ ಜನ ಕೂಗುವುದನ್ನು ಕೇಳಿಸಿಕೊಂಡೆ. ನಾವೆಲ್ಲರೂ ಸೇರಿ ಮನವಿ ಮಾಡಿದರೂ ಅರ್ಚಕರಿಂದ ಸ್ಪಂದನೆ ಸಿಗಲಿಲ್ಲ ಎಂದು ಹೇಳಿದರು.

ಎಷ್ಟೇ ಮನವಿ ಮಾಡಿದರೂ ನಮ್ಮನ್ನೆಲ್ಲಾ ಎರಡನೇ ವರಾಂಡದಲ್ಲೇ ನಿಲ್ಲಿಸಿದ್ದರು. ಎಸಿ ಅವರು ಹೋಗಿ ಮನವಿ ಮಾಡಿದ ನಂತರ ಗರ್ಭಗುಡಿಗೆ ಆಹ್ವಾನಿಸಿ ದರ್ಶನ ಮಾಡಿಸಿದರು ಎಂದು ಹೇಳಿದರು.

ದೇವಾಲಯದ ಆಚರಣೆ, ಸಂಪ್ರದಾಯ ನನಗೆ ಗೊತ್ತಿಲ್ಲ. ಅರ್ಚಕರು ಆಡಳಿತಾಧಿಕಾರಿ ಮಾತನ್ನೂ ಕೇಳಲಿಲ್ಲ. ಹೀಗಾಗಿ ಯಾರನ್ನೂ ಬೇಸರ ಪಡಿಸುವ ಉದ್ದೇಶ ನಮ್ಮದಲ್ಲ ಎಂದು ಹೇಳಿದರು. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ಇರಲಿಲ್ಲ, ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಮುಂದಿನ ವರ್ಷ ನಾನೇ ಇದ್ದರೆ ಈ ರೀತಿಯ ಬೆಳವಣಿಗೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ದೇವರ ಅನುಗ್ರಹ ಎಲ್ಲರ ಮೇಲೆ ಇರಲಿ ಎಂದು ಹೇಳಿದರು.

ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಶಕ್ತಿ ಯೋಜನೆಯ ಕಾರಣದಿಂದಾಗಿ ದಾಖಲೆ ಪ್ರಮಾಣದ ಭಕ್ತರು ದೇವಾಲಯಕ್ಕೆ ಬಂದು ಹೋಗಿದ್ದಾರೆ. ಅದೇ ರೀತಿಯಲ್ಲಿ ದಾಖಲೆಯ ಆದಾಯವೂ ಕೂಡ ಸಂಗ್ರಹ ಆಗಿದೆ. ಜಾತ್ರಾ ಮಹೋತ್ಸವ ವೇಳೆ ಸಣ್ಣಪುಟ್ಟ ಸಮಸ್ಯೆಗಳಾಗಿರಬಹುದು. ಮುಂದಿನ ವರ್ಷ ನಾನೇ ಮುಂದೆ ನಿಂತು ಈ ರೀತಿಯ ಯಾವುದೇ ಸಮಸ್ಯೆ ಆಗದ ರೀತಿ ನೋಡಿಕೊಳ್ಳುವೆ ಎಂದು ಹೇಳಿದರು.

ನಾನು ಹೆಚ್ಚು ಕಡಿಮೆ ದೇವಾಲಯದ ಬಾಗಿಲು ತೆರೆದ ದಿನದಿಂದಲೂ ಇಲ್ಲೇ ಇದ್ದೆ. ವಿವಿಐಪಿ ಪಾಸ್ ಹೆಚ್ಚಾಗಿ ಕೊಂಚ ಸಮಸ್ಯೆಯಾಯಿತು. ಎಷ್ಟೋ ಸಂದರ್ಭ ನನ್ನ ಕಾರನ್ನೇ ಪೊಲೀಸರು ತಡೆದಿದ್ದರು. ಅರೆ ಕೊರೆ ನಡುವೆಯೂ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಯಾರೂ ಬೇಸರ ಮಾಡಿಕೊಳ್ಳಬೇಡಿ. ಮಾಧ್ಯಮದವರ ಸಹಕಾರ ಚೆನ್ನಾಗಿತ್ತು. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಒಟ್ಟಿನಲ್ಲಿ ಹಾಸನಾಂಬೆ ಉತ್ಸವ ಈ ಬಾರಿ ಈ ಬಾರಿ ಇತಿಹಾಸ ಸೃಷ್ಟಿ ಮಾಡಿದೆ ಎಂಬುದು ಸಂತಸದ ವಿಷಯ. ಸಣ್ಣ ಪುಟ್ಟ ತೊಂದರೆಯಾಗಿರುವವರಿಗೆ ಕ್ಷಮೆ ಕೋರುವೆ ಎಂದರು.

ಪತ್ರಕರ್ತರ ಅಮಾಧಾನ
ಈ ಬಾರಿಯ ಜಾತ್ರಾ ಮಹೋತ್ಸವ ಆರಂಭವಾದ ದಿನದಿಂದಲೂ ಪತ್ರಕರ್ತರಿಗೆ ಒಂದಲ್ಲ ಒಂದು ರೀತಿ ಕಿರಿ ಕಿರಿ ಮಾಡಲಾಗಿದೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಳ್ಳುಗೋಪಾಲ್ ಸೇರಿದಂತೆ ಅನೇಕರನ್ನು ಲಘುವಾಗಿ ನಡೆಸಿ ಕೊಳ್ಳಲಾಗಿದೆ ಎಂದು ಪತ್ರಕರ್ತರು ತಮ್ಮ ಅಸಮಾಧಾನ ಹೊರಹಾಕಿದರು. ಪ್ರತಿ ವರ್ಷ ಹಾಜರಿದ್ದ ಭಕ್ತರಿಗೆ ದರ್ಶನ ಮಾಡಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ನಿರಾಕರಿಸಿದ್ದು ಏಕೆ ಎಂದು
ಸಚಿವರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮುಂದಿನ ವರ್ಷದ ಮುಹೂರ್ತ
ಒಟ್ಟಿನಲ್ಲಿ ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ಸಣ್ಣ ಪುಟ್ಟ ಗೊಂದಲ, ವಿರೋಧ, ಆಕ್ರೋಶ, ಪ್ರತಿಭಟನೆ ನಡುವೆಯೂ ಉತ್ತಮ ರೀತಿಯಲ್ಲಿ ಸಂಪನ್ನಗೊಂಡಿದ್ದು ಮುಂದಿನ ವರ್ಷ 2024, ಅಕ್ಟೋಬರ್
24 ರಿಂದ ನವೆಂಬರ್ 3 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಮೊದಲ ಮತ್ತು ಕಡೆಯ ದಿನ ಸಾರ್ವಜನಿಕ ದರ್ಶನ ಹೊರತು ಪಡಿಸಿದರೆ ಕೇವಲ ೯ ದಿನ ಮಾತ್ರ ದೇವಿ ಭಕ್ತರಿಗೆ ದರ್ಶನಭಾಗ್ಯ ಕರುಣಿಸಲಿದ್ದಾಳೆ.