ಹಾಸನ; ಕೆರೆಗೆ ಬಿದ್ದ ಚಪ್ಪಲಿಯನ್ನು ತೆಗೆಯಲು ಹೋಗಿ ಇಬ್ಬರು ಜೀವ ಕಳೆದುಕೊಂಡಿರುವ ಘಟನೆ ಬೇಲೂರು ತಾಲ್ಲೂಕಿನ, ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ನಡೆದಿದೆ.
ಶ್ರೀಕಾಂತ್ (15) ವಿಜಯ್ (18) ಮೃತ ದುರ್ದೈವಿಗಳು. ವಿದ್ಯಾಭ್ಯಾಸ ಬಿಟ್ಟಿದ್ದ ಬಳ್ಳೂರು ಗ್ರಾಮದ ಶೀಕಾಂತ್ ಹಾಗೂ ವಿಜಯ್ ಇಂದು ಮೀನು ಹಿಡಿಯಲು ತೆರಳಿದ್ದರು. ಕೆರೆ ಬದಿಯಲ್ಲಿ ನಿಂತು ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಅವರು ಧಾರಾಕಾರ ಮಳೆ ಸುರಿದಿದ್ದರಿಂದ ರಕ್ಷಣೆಗೆಂದು ಏರಿ ಬದಿಯ ಮರದ ಕೆಳಗೆ ಆಶ್ರಯ ಪಡೆದಿದ್ದರು.
ಈ ಸಂದರ್ಭದಲ್ಲಿ ವಿಜಯ್ ಒಂದು ಕಾಲಿನ ಚಪ್ಪಲಿ
ಕೆರೆಗೆ ಬಿದ್ದಿದೆ. ಚಪ್ಪಲಿ ತೆಗೆದುಕೊಳ್ಳಲು ನೀರಿಗೆ ಇಳಿದ ಶ್ರೀಕಾಂತ್ ಹೂಳಿನಲ್ಲಿ ಸಿಲುಕಿ ಮುಳುಗಿದ್ದಾನೆ. ಆತನ ರಕ್ಷಣೆಗೆಂದು ಹೋದ ವಿಜಯ್ ಕೂಡ ನೀರು ಪಾಲಾಗಿದ್ದಾನೆ.
ಶ್ರೀಕಾಂತ್, ಮಹೇಶ್, ಶಶಿಕಲಾ ದಂಪತಿ ಪುತ್ರ. ವಿಜಯ್ ನ ಪಾಲಕರು ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರಿಂದ ಆತನ ಚಿಕ್ಕಪ್ಪ ಶಿವರಾಜ್ ಅವರ ಮನೆಯಲ್ಲಿ ವಾಸವಿದ್ದ.
ಇಬ್ಬರ ಶವಗಳನ್ನೂ ಮುಳುಗು ತಜ್ಞರು ಹೊರತೆಗೆದಾಗ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.