ಹಾಸನ: ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಒಳಗಿನ ಬಣ ಜಗಳ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ, ವಿಪಕ್ಷ ನಾಯಕ ಆರ್. ಅಶೋಕ್ ಅವರು ಹಾಸನದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
“ನಾನು ಪಾರ್ಟಿಯ ಶಿಸ್ತಿನ ಸಿಪಾಯಿ. ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ, ಹೊರಗೆ ಏನು ಮಾತನಾಡಬೇಕು, ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಾರ್ಟಿ ವಿಚಾರಗಳನ್ನು ಹೊರಗಡೆ ಮಾತನಾಡಿಲ್ಲ” ಎಂದರು.
ಪಕ್ಷದ ಉನ್ನತ ನಾಯಕತ್ವದ ಗಮನ:
“ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿ-ಗತಿಗಳನ್ನು ವಿವರಿಸಿದ್ದೇನೆ. ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಮುಂದಿನ ಹದಿನೈದು-ಇಪ್ಪತ್ತು ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನ ಹೊರಬೀಳಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಪ್ರಾಮುಖ್ಯತೆ:
ಬಿಜೆಪಿ ಬಿಟ್ಟು ಹೋದವರ ಉದ್ಧಾರವಾಗಿಲ್ಲ ಎಂಬುದನ್ನು ಉಲ್ಲೇಖಿಸಿ, “ಬಿಜೆಪಿ ನನ್ನ ಶಕ್ತಿ, ಆಮೇಲೆ ಅಶೋಕ್. ಆಚೆ ಹೋದರೆ ನನ್ನ ಶಕ್ತಿ ಜೀರೋ” ಎಂದು ಅವರು ಭಾವೋದ್ರೇಕದಿಂದ ಹೇಳಿದರು.