ಮುಗಿದ ಬೇಸಿಗೆ ರಜೆ: ಬೆಂಗಳೂರು-ಮಂಗಳೂರು ಹೈವೇಯಲ್ಲಿ ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್- ಪ್ರಯಾಣಿಕರ ಪರದಾಟ

ಚನ್ನಪಟ್ಟಣ ಬೈಪಾಸ್ ವೃತ್ತದಲ್ಲಿ ಟ್ರಾಫಿಕ್ ಪೊಲೀಸರ ಹರಸಾಹಸ| ಹೆಚ್ಚುತ್ತಲೇ ಇರುವ ವಾಹನದಟ್ಟಣೆ

ಹಾಸನ: ಬೇಸಿಗೆ ರಜೆ ಹಾಗೂ ಲಾಂಗ್ ವೀಕೆಂಡ್ ಮುಕ್ತಾಯಗೊಂಡು ನಾಳೆಯಿಂದ ಶಾಲೆಗಳು ಪುನಾರಂಭಗೊಳ್ಳುತ್ತಿರುವುದರಿಂದ ಸಾವಿರಾರು ಜನರು ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ವಾಹನ ದಟ್ಟಣೆಯಿ‌ಂದ ಟ್ರಾಫಿಕ್ ಜಾಮ್ ಉಂಟಾಗಿದೆ.

ಒಂದೇ ಬಾರಿ ನೂರಾರು ವಾಹನಗಳು ರಸ್ತೆಗಿಳಿದಿರುವುದರಿಂದ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಹಾಸನದ ಚನ್ನಪಟ್ಟಣ ಬೈಪಾಸ್‌ ವೃತ್ತದಲ್ಲಿ ನಾಲ್ಕೂ ಬದಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಮುಂದೆ ಚಲಿಸಲಾಗದೆ ಚಾಲಕರು ಪರದಾಡುತ್ತಿದ್ದಾರೆ.

ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ನಗರ ಸಂಚಾರ ಠಾಣೆ ಪೊಲೀಸರು ಹರಸಾಹಸಪಡುತ್ತಿದ್ದಾರೆ. ವಾಹನಗಳ ಸಾಲು ಬೆಳೆಯುತ್ತಲೇ ಇರುವುದು ಸಮಸ್ಯೆ ಹೆಚ್ಚಿಸಿದೆ.