ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ನಗರದ ಅಧಿದೇವತೆ ಹಾಸನಾಂಬೆ ದೇವಿ ಉತ್ಸವ ಸಮೀಪಿಸಿದ ಹಿನ್ನೆಲೆಯಲ್ಲಿ ಇಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ದೇವಿಯ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ರವಾನಿಸಲಾಯಿತು.
ಅ.24 ರಿಂದ ನ.3 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ಆಯೋಜನೆಯಾಗಿದ್ದು, ಒಡವೆಗಳಿಗೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಪೂಜೆ ಸಲ್ಲಿಸಿದರು. ನಂತರ ಬೆಳ್ಳಿರಥದಲ್ಲಿ ಒಡವೆಗಳನ್ನು ಇರಿಸಲಾಯಿತು.
ತಹಸೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಖಜಾನೆ ಅಧಿಕಾರಿಗಳು ಒಡವೆಗಳನ್ನು ಹಸ್ತಾಂತರಿಸಿದರು. ಪೊಲೀಸ್ ಭದ್ರತೆಯಲ್ಲಿ ಮಂಗಳವಾದ್ಯಗಳೊಂದಿಗೆ ಒಡವೆಗಳನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ಪ್ರತಿ ವರ್ಷ ದೇವಿ ದರ್ಶನ ಮುಕ್ತಾಯಗೊಂಡ ನಂತರ ಒಡವೆಗಳನ್ನು ಜಿಲ್ಲಾ ಖಜಾನೆಯಲ್ಲಿರಿಸಲಾಗುತ್ತದೆ. ಗುರುವಾರ ದೇವಾಲಯದ ಬಾಗಿಲು ತೆರೆದ ನಂತರ ಪ್ರಥಮ ಪೂಜೆ ನಡೆಸಿ ದೇವಿಯನ್ನು ಆಭರಣಗಳಿಂದ ಅಲಂಕರಿಸಲಾಗುತ್ತದೆ.