ಹಾಸನ : ಸಕಲೇಶಪುರ ತಾಲೂಕು ಬಾಳ್ಳುಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ತುಂಬಿದ್ದ ಲಾರಿಯೊಂದು ರಸ್ತೆ ಬದಿಯಲ್ಲಿದ್ದ ಶೆಡ್‌ಗೆ ನುಗ್ಗಿದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ.
ಶೆಡ್‌ನಲ್ಲಿದ್ದ ಐವರು ರಸ್ತೆ ಕಾಮಗಾರಿ ನಿರ್ವಹಿಸುವ ಕಾರ್ಮಿಕರು ಹಾಗೂ ಲಾರಿ ಚಾಲಕ, ನಿರ್ವಾಹಕ ಸೇರಿ ಏಳು ಮಂದಿ ಗಾಯಗೊಂಡಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ತಮಿಳುನಾಡಿನ ಅರುಣಾಚಲಂಗೆಂದು ಸಿಮೆಂಟ್ ತುಂಬಿಕೊಂಡು ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಹದಿನಾರು ಚಕ್ರದ ಲಾರಿ
ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೂಲಿ ಕಾರ್ಮಿಕರ ಶೆಡ್‌ಗೆ ನುಗ್ಗಿದೆ.
ಊಟ ಮುಗಿಸಿ ಶೆಡ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಲಾರಿ ಹಾಗೂ ಶೆಡ್ ಬಿದ್ದಿದ್ದು ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಲಾರಿ ವಶಕ್ಕೆ ಪಡೆದಿದ್ದಾರೆ.