ಹೆದ್ದಾರಿಯಿಂದ ಜಾರಿ ಹಳ್ಳಕ್ಕಿಳಿದ ಕೆ.ಎಸ್.ಆರ್.ಟಿ.ಸಿ. ಬಸ್; ಪ್ರಯಾಣಿಕರು ಪಾರು

ಹಾಸನ: ಚತುಷ್ಪಥ ಹೆದ್ದಾರಿಯಲ್ಲಿ ರಾಂಗ್ ರೂಟ್ ನಲ್ಲಿ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ ಪರಿಣಾಮ ಕೆ.ಎಸ್.ಆರ್.ಟಿ.ಸಿ. ಬಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದು ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಭಾನುವಾರ ರಾತ್ರಿ ತಾಲೂಕಿನ ಕಂದಲಿ ಬಳಿ ನಡೆದಿದೆ.

ಸಕಲೇಶಪುರದಿಂದ ಹಾಸನದ ಕಡೆ ಬರುತ್ತಿದ್ದ KA-13 F-2396 ನಂಬರ್‌ನ ಹಾಸನ ಡಿಪೋದ ಬಸ್ ಕಂದಲಿ ಸಮೀಪ ಎದುರುಗಡೆ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಹಳ್ಳಕ್ಕೆ ಇಳಿಯಿತು.

ಇದರಿಂದ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ-ನಿರ್ವಾಹಕ ಬೇರೆ ಬಸ್‌ನಲ್ಲಿ ಪ್ರಯಾಣಿಕರನ್ನು ಕಳುಹಿಸಿದರು.

ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.