ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಡಾ. ಸಿ.ಎನ್.ಮಂಜುನಾಥ್ ಸ್ಪರ್ಧೆ! ಇಬ್ಬರ ತಂದೆ ಹೆಸರು, ಜಿಲ್ಲೆ, ತಾಲೂಕು, ಸ್ಪರ್ಧಿಸುವ ಕ್ಷೇತ್ರವೂ ಸೇಮ್!

ಬಿಎಸ್ಪಿ ಅಭ್ಯರ್ಥಿಯಾಗಲಿರುವ ಮತ್ತೊಬ್ಬ ಸಿ.ಎನ್.ಮಂಜುನಾಥ್

ಚನ್ನರಾಯಪಟ್ಟಣ; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ವೈದ್ಯ, ತಾಲೂಕು ಮೂಲದ ಡಾ.ಸಿ. ಎನ್. ಮಂಜುನಾಥ್ ಸ್ಪರ್ಧಿಸುತ್ತಿದ್ದು, ಇದೀಗ ಅವರ ತಾಲೂಕಿನಿಂದ ಅದೇ ಕ್ಷೇತ್ರಕ್ಕೆ ಅದೇ ಹೆಸರಿನ ಮತ್ತೊಬ್ಬ ಡಾ.ಸಿ.ಎನ್. ಮಂಜುನಾಥ್ ಎಂಬವರು ಚುನಾವಣಾ‌ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಸ್ಪರ್ಧೆ ಒಡ್ಡಲು ಅದೇ ಹೆಸರಿನ ಗೌರವ ಡಾಕ್ಟರೇಟ್ ಮೂಲಕ ಹೆಸರಿನ ಮುಂದೆ ಡಾಕ್ಟರ್ ಹೊಂದಿರುವ ವ್ಯಕ್ತಿ ಬಹುಜನ ಭಾರತ್ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಕುತೂಹಲ ಸಂಗತಿಯೆಂದರೆ ಒಂದೇ ಹೆಸರು ಹೊಂದಿರುವ ಇಬ್ಬರ ತಂದೆಯ ಹೆಸರೂ ಒಂದೇ ಆಗಿದ್ದು, ಒಂದೇ ಜಿಲ್ಲೆ, ಒಂದೇ ತಾಲೂಕಿನವರಾಗಿರುವ ಇಬ್ಬರಲ್ಲಿ ಒಬ್ಬರು ವೃತ್ತಿಯಿಂದ ವೈದ್ಯರು, ಮತ್ತೊಬ್ಬರು ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪಡೆದಿರುವವರು ಎಂಬುದಷ್ಟೇ‌ ವ್ಯತ್ಯಾಸ

ಈ ಸಂಬಂಧ ಬಿಎಸ್ಪಿ ಅಭ್ಯರ್ಥಿಯಾಗುತ್ತಿರುವ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದಲಿತರೇ ನಿರ್ಣಾಯಕರಾಗಿದ್ದಾರೆ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅಲ್ಲಿನ ಜನರ ಮತ ಪಡೆಯುತ್ತೇನೆ. ಇದೇ ಕಾರಣಕ್ಕಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.