ರಣಭೀಕರ ಕಾಳಗದಲ್ಲಿ ಒಂಟಿ ಸಲಗದ ದಾಳಿಗೆ ಬಲಿಯಾಯ್ತು ಎಂಟು ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ!

ಹಾಸನ: ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರಣ್ಯ ಇಲಾಖೆಯ ಸಾಕಾನೆ ಅರ್ಜುನ ಇಂದು ಸಕಲೇಶಪುರ ತಾಲೂಕು ಯಸಳೂರು ಬಳಿ ಕಾಡಾನೆ ದಾಳಿಗೆ ಬಲಿಯಾಗಿದೆ.

ನಾಲ್ಕು ಸಾಕಾನೆಗಳೊಂದಿಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಯತ್ನಿಸುತ್ತಿದ್ದರು.

ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಿಢೀರ್ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಅಲ್ಲಿಂದ ಓಡಿ ಹೋದವು.

ಆದರೆ ಅರ್ಜುನ ಒಂಟಿಸಲಗದ ಜತೆ ಕಾಳಗಕ್ಕಿಳಿಯಿತು. ದುರಾದೃಷ್ಟವಶಾತ್ ಮದಗಜಗಳ ಕಾಳಗದಲ್ಲಿ ಎದೆ ಭಾಗಕ್ಕೆ ಪೆಟ್ಟು ತಿಂದ ಅರ್ಜುನ ಸ್ಥಳದಲ್ಲೇ ಕೊನೆಯುಸಿರೆಳೆಯಿತು.

ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಅರ್ಜುನನ ಮೇಲೆ ಕುಳಿತಿದ್ದ ಇಬ್ಬರು ಮಾವುತರು ಇಳಿದು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.