ಕೇಸರಿ ಶಾಲು ಹಾಕಿದವರೆಲ್ಲ ಬಿಜೆಪಿ ಕಾರ್ಯಕರ್ತರು ಎನ್ನಲು ಆಗುತ್ತಾ? ಚಿಕ್ಕಪ್ಪನ ಪರ ಬ್ಯಾಟ್ ಬೀಸಿದ ಪ್ರಜ್ವಲ್ ರೇವಣ್ಣ

ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ರೆ ಏನು ಮಾಡೋದು?

ಹಾಸನ: ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು? ಕೇಸರಿ ಶಾಲು ಹಾಕಿದವರೆಲ್ಲ ಬಿಜೆಪಿ ಕಾರ್ಯಕರ್ತರು ಎನ್ನಲು ಆಗುತ್ತಾ? ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.

ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು ಎಂಬ ಎಚ್.ಡಿ.ದೇವೇಗೌಡರ ಹೇಳಿಕೆಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ದೇಗುಲದ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕಿರ್ತಾರೆ, ಅದು ಧಾರ್ಮಿಕ ಸಂಕೇತ ಅಷ್ಟೇ ಕುಮಾರಣ್ಣ ಜೆಡಿಎಸ್‌ಗೆ ಸದಾ ಆಶ್ರಯ ನೀಡೋರು, ಮಂಡ್ಯ ಪ್ರತಿಭಟನೆ ವೇಳೆಯಲ್ಲಿ ಕುಮಾರಸ್ವಾಮಿ ಅವರಿಗೆ ಯಾರೋ ಕಾರ್ಯಕರ್ತ ಬಂದು ಕೇಸರಿ ಶಾಲು ಹಾಕಿದ್ದರು. ಇದನ್ನು ತಪ್ಪಾಗಿ ತಿಳಿಯುವ ಅಗತ್ಯ ಇಲ್ಲ ಎಂದರು.

ಲೋಕಸಭಾ ಚುನಾವಣೆಗೆ ನಾನು ಮೊದಲಿನಿಂದಲೂ ಸಕ್ರಿಯವಾಗಿದ್ದೇನೆ. ಜನರಿಗೆ ಸ್ಪಂದಿಸಿ, ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇನೆ. ಆಗಿಂದಾಗ್ಗೆ ಎಲ್ಲಾ ಭಾಗಕ್ಕೆ ಭೇಟಿ ನೀಡಿ ಜನರ ಜತೆ ಇದ್ದೇನೆ.

ಮೈತ್ರಿ ಸ್ಥಾನ ಹಂಚಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ, ಬಿಜೆಪಿ ವರಿಷ್ಠರು ಕುಳಿತು ತೀರ್ಮಾನ ಮಾಡ್ತಾರೆ. ಖಂಡಿತಾ ಸಿಹಿ ಸುದ್ದಿ ಸಿಗಲಿದೆ ಎಂದರು.

ಹಾಸನ, ಮಂಡ್ಯ ಕ್ಷೇತ್ರ ಬಿಜೆಪಿಗೆ ಸಿಗಲಿದೆ ಎಂಬ ಬಿಜೆಪಿ ರಾಜ್ಯ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬರು ಹೇಳ್ತಾರೆ ಆದರೆ ಇದನ್ನೆಲ್ಲಾ ದೊಡ್ಡವರು ಕುಳಿತು ತೀರ್ಮಾನ ಮಾಡಲಿದ್ದಾರೆ. ಬಿಜೆಪಿಯ ಬಹುತೇಕ ಕಾರ್ಯಕರ್ತರು ಕೂಡ ನಮ್ಮ ಬೆಂಬಲಕ್ಕೆ ಇದ್ದಾರೆ ಎಂದರು.

ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಎಲ್ಲರ ಮನಸ್ಸಿನಲ್ಲಿದೆ. ಇಲ್ಲಿ ಯಾವುದೇ ಕಾರ್ಯಕರ್ತರು, ಮುಖಂಡರಲ್ಲಿ ಗೊಂದಲವಿಲ್ಲ. ಅವರ ಮನಸ್ಸಿನಲ್ಲಿ ಇರೋದನ್ನ ಅವರವರು ಹೇಳ್ಕೊತಾರೆ. ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಏನೇನೋ ಆಗುತ್ತೆ. ಬಿಜೆಪಿಯವರು ಎಲ್ಲಾ ಜಿಲ್ಲೆಗಳಿಗೂ ಹೋಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದಾರೆ. ಕುಮಾರಸ್ವಾಮಿ ಅವರು ಜಿಲ್ಲೆ, ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಿಲ್ಲಿ ಸಭೆ ಮಾಡಬೇಕೆಂದು ತೀರ್ಮಾನ ಮಾಡಬೇಕು.
ಈ ಸೆಷನ್ ಮುಗಿದ ಮೇಲೆ ಎಲ್ಲಾ ತೀರ್ಮಾನ ಆಗುತ್ತೆ ಎಂದು ಪರೋಕ್ಷವಾಗಿ ಪ್ರೀತಂಗೌಡ ಹೇಳಿಕೆಗೆ ಟಾಂಗ್ ನೀಡಿದರು.

ಕಾಂಗ್ರೆಸ್‌ನ ನಮ್ಮ ಹಕ್ಕು ನಮ್ಮ ತೆರಿಗೆ ಘೋಷಣೆಗೆ ಟಾಂಗ್ ನೀಡಿದ ಅವರು, ಹಾಗಿದ್ದರೆ ಜನರ ತೆರಿಗೆ ಹಣವನ್ನು ಇವರ ಫ್ರೀ ಗ್ಯಾರಂಟಿಗೆ ಬಳಸಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ರೆ ಏನು ಮಾಡೋದು ಎಂದು ಪ್ರಶ್ನಿಸಿದರು.

‍ನಾವು ಅಖಂಡ ಭಾರತದಲ್ಲಿ ಇದ್ದೇವೆ, ಅಭಿವೃದ್ಧಿ, ರಾಜ್ಯಗಳಿಂದ ಹಿಂದುಳಿದ ರಾಜ್ಯಗಳಿಗೆ ಅನುದಾನ‌ ಕೊಡೋದು ಸಾಮಾನ್ಯ, ಅವರು ಹೋರಾಟ ಮಾಡಲಿ,
ಆದರೆ ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಸುಮ್ಮನೆ ಕೇಂದ್ರದಿಂದ ಏನೂ ಅನುದಾನ ಬಂದೇ ಇಲ್ಲ ಎನ್ನುವ ಭಾವನೆ ಮೂಡಿಸೋದು ಸರಿಯಲ್ಲ ಎಂದರು.

ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಬಹುದು ಎಂಬ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಭಾರತ ಒಡೆಯುವ ಹೇಳಿಕೆ ಯಾರೂ ಕೊಡಬಾರದು. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

ಭಾರತ ಒಂದಾಗಿರುತ್ತೆ, ಭಾರತೀಯರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಡಿಕೆ‌ ಸುರೇಶ್ ಹೇಳಿಕೆಗೆ ಸಂಸದ ಪ್ರಜ್ವಲ್ ತಿರುಗೇಟು ನೀಡಿದರು.