ಅರಕಲಗೂಡಿನಲ್ಲಿ ಮೈತ್ರಿಗೆ ಹಿನ್ನಡೆ; ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು

ಹಾಸನ: ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಜೆಪಿ-ಜೆಡಿಎಸ್ ಮೈತ್ರಿ ಕೈತಪ್ಪಿ ಕಾಂಗ್ರೆಸ್ ಪಾಲಾಗಿದ್ದು, ಉಪಾಧ್ಯಕ್ಷ ಸ್ಥಾನ ಲಾಟರಿ ಅದೃಷ್ಟದ ಮೂಲಕ‌ ಮೈತ್ರಿಗೆ ಒಲಿಯಿತು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರಿಗೆ ವಿಪ್ ಜಾರಿಗೊಳಿಸಿದರೂ ಮೈತ್ರಿ ಅಭ್ಯರ್ಥಿಗೆ ಸೋಲುಂಟಾಗಿದ್ದು ಕಾಂಗ್ರೆಸ್ ಪಕ್ಷದ ಪ್ರದೀಪ್ ಕುಮಾರ್ ಅಧ್ಯಕ್ಷರಾಗಿ ವಿಜಯಶಾಲಿಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿ ಸುಭಾನ ಷರೀಫ್ ಲಾಟರಿ ಮೂಲಕ ಅದೃಷ್ಟಶಾಲಿಯಾಗಿ ಆಯ್ಕೆಯಾದರು.

ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ 10 ಮತಗಳನ್ನು ಗಳಿಸಿ ಚುನಾಯಿತರಾದರು. ಪ್ರತಿಸ್ಪರ್ಧಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ರಮೇಶ್ ವಾಟಾಳ್ 9 ಮತಗಳನ್ನು ಪಡೆದು ಪರಾಭವಗೊಂಡರು. ಬಿಜೆಪಿ, ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಭಾನ ಷರೀಫ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಲ್ಲವಿ ಅವರಿಗೆ ತಲಾ 9 ಮತಗಳು ಲಭಿಸಿದವು. ಲಾಟರಿ ಮೂಲಕ ಸುಭಾನ ಷರೀಫ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ತಹಸೀಲ್ದಾರ್ ಕೆ.ಸಿ. ಸೌಮ್ಯ, ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ ಚುನಾವಣಾ ಕಾರ್ಯ ನಿರ್ವಹಿಸಿದರು.