ಟಿಹೆಚ್‌ಒಗೆ ಕಿರುಕುಳ ಆರೋಪ; ಅರಕಲಗೂಡು ಸಾರ್ವಜನಿಕ ಆಸ್ಪತ್ರೆ ಪ್ರಭಾರ ಆಡಳಿತ ವೈದ್ಯಾಧಿಕಾರಿ ವರ್ಗಾವಣೆಗೆ ದಸಂಸ ಆಗ್ರಹ

ಆಧಾರ ರಹಿತ ಸುಳ್ಳು ದೂರು ಕೊಡಿಸುವ ಮೂಲಕ ಪುಷ್ಪಲತಾ ಅವರಿಗೆ ತೊಂದರೆ

ಹಾಸನ: ಅರಕಲಗೂಡು ಟಿಹೆಚ್‌ಒ ಆಗಿದ್ದ ಪುಷ್ಪಲತಾ ದಲಿತ ಮಹಿಳೆ ಎಂಬ ಕಾರಣಕ್ಕೆ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಕುತಂತ್ರ ಮಾಡಿ ಮಾನಸಿಕ ಕಿರುಕುಳ ನೀಡುತ್ತಿರುವ ಅರಕಲಗೂಡು ಸಾರ್ವಜನಿಕ ಆಸ್ಪತ್ರೆ ಪ್ರಭಾರ ಆಡಳಿತ ವೈದ್ಯಧಿಕಾರಿ ವರ್ಗಾವಣೆ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಕೆ. ಸಂದೇಶ್ ಆಗ್ರಹಿಸಿದರು.
    ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಭಾರ ಆಡಳಿತ ವೈದ್ಯಾಧಿಕಾರಿ ಆಗಿರುವ ಡಾ.ಸ್ವಾಮಿಗೌಡ ಮತ್ತು ಡಿ.ಹೆಚ್.ಒ. ಡಾ.ಶಿವಸ್ವಾಮಿ ಅವರು ಆರ್.ಟಿ.ಐ. ಕಾರ್ಯಕರ್ತನೊಬ್ಬನ ಮೂಲಕ  ಆಧಾರ ರಹಿತ ಸುಳ್ಳು ದೂರು ಕೊಡಿಸುವ ಮೂಲಕ ಪುಷ್ಪಲತಾ ಅವರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿದರು.
ಮಾನಸಿಕ ಹಿಂಸೆ, ಕಿರಿಕುಳ ಮತ್ತು ಅಪಮಾನ ಮಾಡಿರುವುದು ಖಂಡನೀಯ. ಡಾ.ಸ್ವಾಮಿಗೌಡ ೨೫ ವರ್ಷಗಳಿಂದ ಅರಕಲಗೂಡಿನಲ್ಲೇ ಟಿ.ಹೆಚ್.ಒ. ಮತ್ತು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ರಾಜಕೀಯ ಪ್ರಭಾವದಿಂದ ಈಗಲೂ ಆಡಳಿತ ವೈದ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಯಾವುದೇ ಕೆಲಸವನ್ನು ಸರಿಯಾಗಿಲ್ಲ ಮಾಡುತ್ತಿಲ್ಲ. ಇವರ ದುರಹಂಕಾರ ಮತ್ತು ಇಲಾಖಾ ವಿರುದ್ಧವಾದ ಕ್ರಮಗಳಿಂದ ಅನೇಕ ವೈದ್ಯರು ಮತ್ತು ನರ್ಸ್‌ಗಳು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ.
ಬಳಿಕ ಪುಷ್ಪಲತಾ ಅವರ ಅಮಾನತಿಗೆ ಕಾರಣರಾಗಿದ್ದರು. ಇದೀಗ ಅವರು ಕೋರ್ಟ್‌ನಿಂದ ತಡೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಆದರೂ ಇವರನ್ನು ಹುದ್ದೆಯಿಂದ ಕೆಳಗಿಳಿಸುವ ಕುತಂತ್ರ ನಡೆಯುತ್ತಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಕೂಡಲೇ ವರ್ಗ ಮಾಡಬೇಕು ಎಂದು ಆಗ್ರಹಿಸಿದರು.
ಡಿಸಿ ಹಾಗೂ ಜಿಪಂ ಸಿಇಒ ಅವರು ಗಮನಹರಿಸಿ ಪುಷ್ಪಲತಾ ಅವರನ್ನು ಅಲ್ಲೇ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಹಿರಿಯ ಮುಖಂಡರಾದ ಕೆ. ಈರಪ್ಪ, ಹೆಚ್.ಡಿ. ಮಂಜುನಾಥ್, ಹೆಚ್.ಎಸ್. ಕುಮಾರ್ ಗೌರವ್, ಹೆಚ್. ದೇವರಾಜು, ಪಿ. ಶಂಕರ್ ಇದ್ದರು.