ಹಾಸನ: ಅರಕಲಗೂಡು ತಾಲ್ಲೂಕಿನ ಕೊಣನೂರು ಪಟ್ಟಣದಲ್ಲಿ ತಿಥಿ ಕಾರ್ಯಕ್ಕೆ ಸಿಹಿ ತಿಂಡಿ ತಯಾರಿಸುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೃತರ ಸಂಖ್ಯೆ ಈಗ ಮೂರಕ್ಕೆ ಏರಿಕೆಯಾಗಿದೆ.
ಮೀನಾಕ್ಷಿ (50) ಮೃತ ಮಹಿಳೆ. ಈ ದುರಂತ ಮಾರ್ಚ್ 30 ರಂದು ಕೊಣನೂರು ಪಟ್ಟಣದ ಗೌಡರ ಬೀದಿಯ ಪಟೇಲ್ ರಾಮೇಗೌಡ ಎಂಬುವವರ ಮನೆಯಲ್ಲಿ ನಡೆದಿತ್ತು.
ಕರಿಯಕ್ಕ ಎಂಬುವವರ ತಿಥಿ ಕಾರ್ಯದ ನಿಮಿತ್ತ ಮಹಿಳೆಯರು ತಿಂಡಿ ಬೇಯಿಸುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಮೂವರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದರು.

ಗಾಯಾಳುಗಳಿಗೆ ಮೊದಲು ಕೊಣನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಅರಕಲಗೂಡು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯಗಳ ತೀವ್ರತೆಯಿಂದಾಗಿ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಏಪ್ರಿಲ್ 1) ಮಂಗಳ (50) ಮತ್ತು ರಾಧಾ (60) ಎಂಬ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಇಂದು (ಏಪ್ರಿಲ್ 2) ಮೀನಾಕ್ಷಿ ಕೂಡ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಈ ದುರಂತ, ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ.