ಹಾಸನ : ಹಾಸನಾಂಬೆ ಜಾತ್ರಾ ಮಹೋತ್ಸವದ ವೇಳೆ ಮತ್ತೊಂದು ವಿದ್ಯುತ್ ಅವಘಡ ತಡವಾಗಿ ಬೆಳಕಿಗೆ ಬಂದಿದೆ.
ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ.
ನಿನ್ನೆ ತಡರಾತ್ರಿ ನಡೆದ ಸಿದ್ದೇಶ್ವರಸ್ವಾಮಿ ಚಂದ್ರಮಂಡಲೋತ್ಸವ ಹಾಗೂ ರಥೋತ್ಸವದ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ.
ಸಿದ್ದೇಶ್ವರಸ್ವಾಮಿ ರಥೋತ್ಸವ ಹೊಸಲೈನ್ ರಸ್ತೆಯಲ್ಲಿ ಸಾಗುವ ವೇಳೆ ಕಳಸಕ್ಕೆ ವಿದ್ಯುತ್ ತಂತಿ ತಗುಲಿ ಶಾರ್ಟ್ ಆಗಿದೆ. ಕಳಸ ತಗುಲುತ್ತಿದ್ದಂತೆ ಪ್ರವಹಿಸಿದ ವಿದ್ಯುತ್ ನಿಂದ ಬೆದರಿದ ಭಕ್ತರು
ಕೂಡಲೇ ರಥ ನಿಲ್ಲಿಸಿದ್ದಾರೆ. ಇದರಿಂದ ಕೆಲಕಾಲ ರಥೋತ್ಸವ ಸ್ಥಗಿತಗೊಂಡಿತ್ತು.
ನಂತರ ವಿದ್ಯುತ್ ತಂತಿ ಮೇಲೆತ್ತಿ ಭಕ್ತರು ರಥೋತ್ಸವ ಮುಂದುವರಿಸಿದರು. ಒಂದು ವೇಳೆ ವಿದ್ಯುತ್ ಆಘಾತ ಗಂಭೀರ ಸ್ವರೂಪದ್ದಾಗಿದ್ದರೆ ಭಾರಿ ಅವಘಡವೇ ಸಂಭವಿಸುತ್ತಿತ್ತು.
ನ.10 ರಂದು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್ ಹೊಡೆದು ಅಲ್ಲೋಲ ಕಲ್ಲೋಲ ಉಂಟಾಗಿತ್ತು.