ಪಾನಮತ್ತನಾಗಿ ಒಂಟಿ ಮಹಿಳೆ ಮನೆ ಬಾಗಿಲು ಮುರಿದು ಒಳನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ದುರುಳ; ನೆರೆಯವರ ಸಹಾಯದಿಂದ ಬಚಾವಾದ ಕೂಲಿ ಕಾರ್ಮಿಕ ಮಹಿಳೆ

ಬಳ್ಳಾರಿ ಜಿಲ್ಲೆ ಮೂಲದ ಮಹಿಳೆಯ ಮೇಲೆ ಪ್ರಕಾಶ್‌ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಹಾಸನ: ಪಾನಮತ್ತ ವ್ಯಕ್ತಿಯೊಬ್ಬ ಒಂಟಿ ಮಹಿಳೆಯೊಬ್ಬರ ಮನೆ ಬಾಗಿಲು ಮುರಿದು ಒಳನುಗ್ಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ಘಟನೆ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ತಾಲೂಕಿನ ಕಾಫಿ ತೋಟವೊಂದರಲ್ಲಿ 13 ವರ್ಷಗಳಿಂದ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿರುವ ಬಳ್ಳಾರಿ ಜಿಲ್ಲೆ ಮೂಲದ ಮಹಿಳೆಯ ಮೇಲೆ ಪ್ರಕಾಶ್‌ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮದ್ಯಪಾನ ಮಾಡಿ ಬಂದು ಮಹಿಳೆಯ ಮನೆ ಎದುರು ಅರೆಬೆತ್ತಲಾಗಿ ಓಡಾಡಿದ ಪ್ರಕಾಶ ಬಾಗಿಲು ತೆಗೆಸಲು ಯತ್ನಿಸಿದ್ದಾನೆ. ಆದರೆ ಮಹಿಳೆ ಬಾಗಿಲು ತೆರೆಯದಿದ್ದಾಗ ಮುಂಬಾಗಿಲು ಒಡೆದು ಒಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಮಹಿಳೆ ಗಾಬರಿಯಿಂದ ಕೂಗಿಕೊಂಡಿದ್ದಾರೆ. ಅಕ್ಕ-ಪಕ್ಕದ ಮನೆಯವರು ತಕ್ಷಣವೇ ಅಲ್ಲಿಗೆ ಬಂದು ಆಕೆಯನ್ನು ರಕ್ಷಿಸಿದ್ದಾರೆ.

ಅರೆಬೆತ್ತಲಾಗಿದ್ದ ಆರೋಪಿ ಅದೇ ಸ್ಥಿತಿಯಲ್ಲಿ ಅಲ್ಲಿಂದ ಓಡಿ ಹೋಗಿದ್ದಾನೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯಿಂದ ದೂರು ಪಡೆದುಕೊಂಡಿದ್ದಾರೆ.