ಹಾಸನ: ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಆಲೂರು ತಾಲ್ಲೂಕಿನ, ಕಾಡ್ಲೂರು ಕೂಡಿಗೆ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಿಂದ ಆಚೆ ಬಂದಿದ್ದ ಜಿಂಕೆಯನ್ನು ಸುತ್ತುವರಿದ ಬೀದಿನಾಯಿಗಳು ಮನಸೋಇಚ್ಛೆ ಕಚ್ಚಿ ಗಾಯಗೊಳಿಸಿದವು.
ಸ್ಥಳೀಯರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಸಿಬ್ಬಂದಿ ಜಿಂಕೆಗೆ ಆಲೂರು ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಟ್ಟಿದ್ದಾರೆ.
ಆದರೆ ಗಾಯಗೊಂಡಿರುವ ಜಿಂಕೆ ಒಂದೇ ಜಾಗದಲ್ಲಿ ಮಲಗಿದ್ದು, ತನ್ನ ಹಿಂಡು ಸೇರಿಕೊಳ್ಳಲಾಗದೆ ನರಳುತ್ತಿದೆ. ಕಾಡ್ಲೂರು ಸುತ್ತಮುತ್ತ ಜಿಂಕೆಗಳ ಸಂಖ್ಯೆ ಹೆಚ್ಚಿದ್ದು ವಾರದಲ್ಲಿ ನಾಲ್ಕು ಜಿಂಕೆಗಳು ಬೀದಿನಾಯಿಗಳ ಬಾಯಿಗೆ ಸಿಲುಕಿ ಗಾಯಗೊಂಡಿವೆ.