ಹಾಸನ: ರಸ್ತೆಯ ಮಧ್ಯೆ ಬಂದು ನಿಂತ ಕಾಡಾನೆ ವಾಹನಗಳು ಸಂಚರಿಸುತ್ತಿದ್ದರಿಂದ ಸಿಟ್ಟಗೆದ್ದು ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿ ವಾಹನಗಳ ಓಡಾಟಕ್ಕೆ ತಡೆಯೊಡ್ಡಿದ ಘಟನೆ ಸಕಲೇಶಪುರ ತಾಲ್ಲೂಕಿನ, ಹೆತ್ತೂರು-ಕರಡಿಗಾಲ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಾಡಾನೆ ಕಂಡು ಕೆಲಕಾಲ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ನಿಂತ ವಾಹನ ಸವಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಇಟಿಎಫ್ ಸಿಬ್ಬಂದಿ ರಸ್ತೆಗೆ ಬಿದ್ದಿದ್ದ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಆದರೂ ಸ್ಥಳದಿಂದ ಕದಲದ ಕಾಡಾನೆ, ಕೆಲಹೊತ್ತು ರಸ್ತೆಯಲ್ಲಿಯೇ ನಿಂತು ನಂತರ ಅರಣ್ಯದೊಳಗೆ ಹೋಯಿತು. ಹೆತ್ತೂರು-ಕರಡಿಗಾಲ ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.