ಚಿಕ್ಕಪ್ಪನನ್ನೇ ಹೊಡೆದು ಕೊಂದ ದುರುಳ; ಆಸ್ತಿ ಜಗಳ ಕೊಲೆಯಲ್ಲಿ ಅಂತ್ಯ

ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಹೊಡೆದು ಕೊಂದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಪೋತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರುದ್ರಮೂರ್ತಿ (42) ಸಾವನ್ನಪ್ಪಿದ ವ್ಯಕ್ತಿ. ಛಾಯಾಪ್ರಸಾದ್ (40) ಚಿಕ್ಕಪ್ಪನನ್ನೇ ಕೊಂದ ಆರೋಪಿ.

ಜಮೀನು ವಿವಾದದ ಕಾರಣ ಇಬ್ಬರ ನಡುವೆ ಶುರುವಾದ ಜಗಳ ಮಾತಿಗೆ ಮಾತು ಬೆಳೆದು ಜೋರಾಗಿದೆ. ಆಗ ಛಾಯಾಪ್ರಸಾದ್ ರುದ್ರಮೂರ್ತಿ ಎದೆಗೆ ಹೊಡೆದಿದ್ದಾನೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಮೂರ್ತಿಗೆ ಸ್ಟೆಂಟ್ ಅಳವಡಿಸಲಾಗಿತ್ತು. ಹೃದಯದ ಭಾಗಕ್ಕೆ ಹೊಡೆತ ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದರು.

ಕೂಡಲೇ ಕುಟುಂಬಸ್ಥರು ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.