ಶಾಲಾ ಮೈದಾನದಲ್ಲಿ ಆಟವಾಡಲು ಬಿಡಲಿಲ್ಲ ಎಂದು ಸ್ಕೂಲ್ ಕಟ್ಟಡಕ್ಕೆ ಬೆಂಕಿಹಚ್ಚಿದ ಪುಂಡರು!

ಸಕಲೇಶಪುರ: ಶಾಲಾ ಮೈದಾನದಲ್ಲಿ ಆಟವಾಡಲು ಬಿಡಲಿಲ್ಲ ಆಕ್ರೋಶಗೊಂಡ ಪುಂಡರ ಗುಂಪೊಂದು ಶಾಲಾ ಕಟ್ಟಡಕ್ಕೆ ಬೆಂಕಿ ಹಚ್ಚಿದ ಘಟನೆ ಬೆಳಗೋಡು ಹೋಬಳಿಯ ನೀಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಆರೋಪಿಗಳು ಬೆಂಕಿ ಹಚ್ಚಿದ ನಂತರ ಪರಾರಿಯಾಗಿದ್ದಾರೆ. ಈ ಮೊದಲು ಶಾಲೆಯ ಭದ್ರತೆಗಾಗಿ ಅಳವಡಿಸಲಾಗಿದ್ದ ತಂತಿ ಬೇಲಿಯನ್ನು ಕೂಡ ಈ ಗುಂಪು ನಾಶಪಡಿಸಿತ್ತು ಎನ್ನಲಾಗಿದೆ. ಅಲ್ಲದೆ, ಅವರು ಶಿಕ್ಷಕರ ಮೇಲೂ ಹಲ್ಲೆಗೆ ಮುಂದಾಗಿದ್ದ ಪ್ರಕರಣಗಳೂ ನಡೆದಿದ್ದವು ಎನ್ನಲಾಗಿದೆ.

ಶಾಲಾ ಆವರಣದಲ್ಲಿ ಅನೈತಿಕ ಕೃತ್ಯಗಳ ಸಂಕೇತವಾಗಿ ಕಂಡೋಮ್‌ಗಳನ್ನು ಬಿಸಾಡಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ. ಈ ಬಗ್ಗೆ ಸ್ಥಳೀಯರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ, ಪೊಲೀಸರ ನಿರ್ಲಕ್ಷ್ಯದಿಂದ ಈ ದುಷ್ಕೃತ್ಯ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಎಂಟು ಮಂದಿಯ ವಿರುದ್ಧ ದೂರು ದಾಖಲಾಗಿದ್ದರೂ, ಯಾವುದೇ ಕಾನೂನು ಕ್ರಮ ಕೈಗೊಂಡಿರಲಿಲ್ಲ. ಇದೀಗ ಗ್ರಾಮಸ್ಥರು ಮತ್ತು ಶಾಲಾ ಆಡಳಿತ ಮಂಡಳಿ ಮತ್ತೆ ದೂರು ನೀಡಲಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.