ಚನ್ನರಾಯಪಟ್ಟಣ: ಸ್ನ್ಯಾಪ್ ಚಾಟ್‌ನಲ್ಲಿ ಸ್ಟೇಟಸ್ ಹಾಕಿದ್ದ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಬಿಎಂ ರಸ್ತೆಯ ಶಿವನ ಪಾರ್ಕ್ ಹತ್ತಿರ ಮಂಗಳವಾರ ರಾತ್ರಿ ನಡೆದಿದೆ.
ಪಟ್ಟಣದ ಕೆರೆ ಬೀದಿ ನಿವಾಸಿ ಯತಿರಾಜ್ ಎಂಬುವರ ಮೇಲೆ ಅಡಗೂರಿನ ದಿಲೀಪ್, ಸ್ನೇಹಿತರಾದ ಸಂಜು ಹಾಗು ಇತರ ಆರು ಜನರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸ್ನ್ಯಾಪ್ ಚಾಟ್‌ನಲ್ಲಿ ಸ್ಟೇಟಸ್ ಹಾಕಿರುವ ವಿಚಾರವಾಗಿ ಯತಿರಾಜ್ ಹಾಗು ದಿಲೀಪ್ ನಡುವೆ ಏ. 7ರಂದು ಗಲಾಟೆಯಾಗಿತ್ತು. ಅದೇ ದ್ವೇಷದಿಂದ ದಿಲೀಪ್ ಮತ್ತು ಸ್ನೇಹಿತರು ಯತಿರಾಜ್ ಮೇಲೆ ಹಲ್ಲೆ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ 10.30ರ ಸಮಯದಲ್ಲಿ ಚಿಕ್ಕಮತಿಘಟ್ಟ ಗ್ರಾಮದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ನೋಡಲೆಂದು ಯತಿರಾಜ್ ಹಾಗು ಸ್ನೇಹಿತರು ಬೈಕ್‌ನಲ್ಲಿ ತೆರಳುತ್ತಿದ್ದರು. ಅಷ್ಟರಲ್ಲಿ ಬರಗೂರಿನ ರಘು ಎಂಬಾತ ಕರೆ ಮಾಡಿ ಇಲ್ಲಿ ಅಡಗೂರು ದಿಲೀಪ್ ಬಂದಿದ್ದು ಆರ್ಕೆಸ್ಟ್ರಾ ನೋಡಲು ಬರಬೇಡಿ ಎಂದಿದ್ದಾನೆ.
ಅದರಿಂದ ಎಚ್ಚೆತ್ತ ಯತಿರಾಜ್ ವಾಪಾಸ್ ಬರುತ್ತಿದ್ದಾಗ ವಿಷಯ ತಿಳಿದು ಹಿಂಬಾಲಿಸಿಕೊಂಡು ಬಂದ ದಿಲೀಪ್ ಹಾಗು ಇತರರು ಬೈಕ್ ಅಡ್ಡಗಟ್ಟಿ ಗಲಾಟೆ ಶುರು ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಯತಿರಾಜ್‌ನ ಎದೆ ಭಾಗಕ್ಕೆ ಚಾಕುವಿನಿಂದ ದಿಲೀಪ್ ಇರಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.