ಹಾಸನ: ಅಜಾಕ್ಸ್ ಕಾಂಕ್ರೀಟ್ ಮಿಕ್ಸರ್ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಕಾರು ಚಲಾಯಿಸುತ್ತಿದ್ದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟು, ತಾತ ಗಂಭೀರವಾಗಿ ಗಾಯಗೊಂಡ ಘಟನೆ ಅರಸೀಕೆರೆ ತಾಲ್ಲೂಕಿನ ಬಾಣಾವರ ಟೋಲ್ ಬಳಿ ಸಂಭವಿಸಿದೆ.

ಅಪಘಾತದಲ್ಲಿ ಬೆಂಗಳೂರಿನ ಶ್ರೀನಿವಾಸನಗರ ನಿವಾಸಿ ಹೇಮಂತ್ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾತ ಲಕ್ಷ್ಮಣಯ್ಯ (75) ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ.

ಅತೀ ವೇಗವೇ ಕಾರಣ!
KA-02-MG-4985 ನಂಬರ್‌ನ ವ್ಯಾಗನ್-ಆರ್ ಕಾರಿನಲ್ಲಿ ಬೆಂಗಳೂರಿನ ಶ್ರೀನಿವಾಸನಗರ ನಿವಾಸಿಗಳಾದ ತಾತ-ಮೊಮ್ಮಗ ಚಿಕ್ಕಮಗಳೂರಿನತ್ತ ತೆರಳುತ್ತಿದ್ದರು, ಅತೀ ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹಿಂಬದಿಯಿಂದ ಅಜಾಕ್ಸ್ ಯಂತ್ರಕ್ಕೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿಯ ಹೈಮಾಸ್ಟ್ ಲೈಟ್ ಕಂಬಕ್ಕೆ ಬಡಿದು ನಜ್ಜುಗುಜ್ಜಾಗಿದೆ.
ಅಜಾಕ್ಸ್ ವಾಹನವೂ ಪಲ್ಟಿ, ಚಾಲಕನಿಗೆ ಸಣ್ಣಪುಟ್ಟ ಗಾಯ
ಡಿಕ್ಕಿಯ ರಭಸಕ್ಕೆ ಅಜಾಕ್ಸ್ ವಾಹನವೂ ಪಲ್ಟಿಯಾಗಿ, ಅದರ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪರಿಶೀಲನೆ
ಘಟನಾ ಸ್ಥಳಕ್ಕೆ ಬಾಣಾವರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.