ಡಾಬಾದಲ್ಲಿ ಮಹಿಳೆಯರು ಜೋರಾಗಿ ಮಾತನಾಡಿದಕ್ಕೆ ಕಿರಿಕ್: ಮಿನಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳು ಎಸ್ಕೇಪ್

ಹಾಸನ: ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕೆಂಚಟ್ಟಹಳ್ಳಿ ಬಳಿ ಡಾಬಾ ಒಂದರಲ್ಲಿ ನಡೆದ ವಾಗ್ವಾದದಿಂದ ಆಕ್ರೋಶಗೊಂಡ ಅಪರಿಚಿತ ಯುವಕರು ಪ್ರವಾಸ ಹೊರಟಿದ್ದ  ವಾಹನಕ್ಕೆ ಕಲ್ಲು ತೂರಾಟ ನಡೆಸಿ ಮುಂಭಾಗದ ಗಾಜು ಒಡೆದ ಘಟನೆ ಕಳೆದ ರಾತ್ರಿ ನಡೆದಿದೆ.

ಬೆಂಗಳೂರಿನಿಂದ ಕುದುರೆಮುಖಕ್ಕೆ ಕಾರು ಮತ್ತು ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬಗಳು ರಸ್ತೆ ಬದಿ ಡಾಬಾದಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಊಟ ಮಾಡುವಾಗ ಮಹಿಳೆಯರು ಜೋರಾಗಿ ಮಾತನಾಡುತ್ತಿದ್ದು, ಇದೇ ವೇಳೆ ಡಾಬಾದಲ್ಲಿ ಮದ್ಯ ಸೇವಿಸುತ್ತಿದ್ದ ನಾಲ್ವರು ಅಪರಿಚಿತ ಯುವಕರು ಆಕ್ರೋಶಗೊಂಡರು. ಜೋರಾಗಿ ಮಾತನಾಡಬೇಡಿ ಎಂದು ಆವಾಜ್ ಹಾಕಿದ್ದಾರೆ. ಆಗ ಯುವಕರು ಮತ್ತು ಕುಟುಂಬಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.

ವಿವಾದ ಹಿಗ್ಗಿದ ಹಿನ್ನೆಲೆ, ಯುವಕರು ಡಾಬಾದಿಂದ ಹೊರಬಂದು ಮಿನಿ ಬಸ್‌ಗೆ ಕಲ್ಲೆಸೆದು ಪರಾರಿಯಾದರು. ಘಟನೆಯಲ್ಲಿ ಮಿನಿ ಬಸ್ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿ ಆಯಿತು.

ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲೆಸೆದು ಎಸ್ಕೇಪ್ ಆಗಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.