ಹಾಸನ: ಕಳ್ಳತನಕ್ಕೆ ಸಾಥ್ ನೀಡಲು ಒಪ್ಪದಿದ್ದಕ್ಕೆ ಸಿಟ್ಟಿಗೆದ್ದ ಗುಜರಿ ಕಾರ್ಮಿಕನೊಬ್ಬ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಎನ್.ಆರ್.ಸರ್ಕಲ್‌ನಲ್ಲಿ ಕಳೆದ ರಾತ್ರಿ ನಡೆದಿದೆ.
ಚಿತ್ರದುರ್ಗ ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಈ ಘಟನೆಯಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಆರೋಪಿ ಚೇತು, ಹೊಳೇನರಸೀಪುರ ತಾಲ್ಲೂಕಿನ ಓಡನಹಳ್ಳಿ ಗ್ರಾಮದವನು. ಇಬ್ಬರೂ ಹಾಸನ ನಗರದ ಸಿಟಿ ಬಸ್ ನಿಲ್ದಾಣದ ಬಳಿ ವಾಸವಾಗಿದ್ದು, ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿ ಎನ್.ಆರ್.ಸರ್ಕಲ್‌ನಲ್ಲಿರುವ ಬಾರ್‌ವೊಂದರಲ್ಲಿ ಚಿತ್ರಲಿಂಗೇಶ್ವರ ಮತ್ತು ಚೇತು ಮದ್ಯ ಸೇವಿಸುತ್ತಿದ್ದಾಗ, ಚೇತು, “ಕಬ್ಬಿಣದ ಗುಜರಿಯಿದೆ, ಸೇರಿ ಕಳ್ಳತನ ಮಾಡಿಕೊಂಡು ಬರೋಣ” ಎಂದು ಹೇಳಿದ್ದಾನೆ. ಆದರೆ, ಚಿತ್ರಲಿಂಗೇಶ್ವರ ಒಪ್ಪದಿದ್ದಕ್ಕೆ ಕೋಪಗೊಂಡ ಚೇತು, ತನ್ನ ಬಳಿಯಿದ್ದ ಚಾಕುವಿನಿಂದ ಚಿತ್ರಲಿಂಗೇಶ್ವರನಿಗೆ ಇರಿದಿದ್ದಾನೆ.
ಗಾಯಗೊಂಡ ಚಿತ್ರಲಿಂಗೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸ್ಥಳಕ್ಕೆ ಹಾಸನ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.