ಹಾಸನ, ಫೆಬ್ರವರಿ 10: ಪ್ರೀತಿಸಿದ್ದ ಹುಡುಗಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಸೀಕೆರೆ ತಾಲ್ಲೂಕಿನ ಬೈರಾಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ದರ್ಶನ್ (22) ಎಂದು ಗುರುತಿಸಲಾಗಿದೆ. ಬಿಎ ಪದವೀಧರನಾಗಿದ್ದ ಆತ, ಕೃಷಿಕನಾಗಿ ಜೀವನ ಸಾಗಿಸುತ್ತಿದ್ದ. ತನ್ನ ಅಜ್ಜಿ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ಆತ, ಮೋನಿಕಾ ಎಂಬಾಕೆಯನ್ನು ಕಳೆದ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದ.
ದರ್ಶನ ಮತ್ತು ಮೋನಿಕಾ ಪರಸ್ಪರ ಪ್ರೀತಿಸುತ್ತಿದ್ದು, ತನ್ನನ್ನು ಮದುವೆಯಾಗುವಂತೆ ಆಕೆಯ ಮುಂದೆ ಪ್ರಸ್ತಾಪ ಇಟ್ಟಿದ್ದ. ಆದರೆ ಮೋನಿಕಾ ಇದನ್ನು ನಿರಾಕರಿಸಿದ್ದಾಳೆ. ಈ ನಿರಾಕರಣೆಯಿಂದ ಆಘಾತಗೊಂಡಿದ್ದ ಆತ ಮನನೊಂದುಫೆಬ್ರವರಿ 5ರಂದು ಮನೆಯಲ್ಲಿಯೇ ವಿಷ ಸೇವಿಸಿದ್ದ.
ವಿಷ ಸೇವಿಸಿದ ಬಳಿಕ ದರ್ಶನ್ ಗೆ ವಾಂತಿ ಆರಂಭವಾಯಿತು. ಈ ಬಗ್ಗೆ ಸ್ನೇಹಿತರಾದ ರವಿ ಮತ್ತು ಯಶ್ವಂತ್ ವಿಚಾರಿಸಿದಾಗ, “ಮೋನಿಕಾ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ, ನನಗೆ ತುಂಬಾ ಬೇಜಾರಾಗಿದೆ” ಎಂದು ಹೇಳಿ ಕುಸಿದು ಬಿದ್ದಿದ್ದ.
ಸ್ನೇಹಿತರು ತಕ್ಷಣವೇ ಆತನನ್ನು ಅರಸೀಕೆರೆ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದರ್ಶನನನ್ನು ರಕ್ಷಿಸಲಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಯುವಕನ ಸಾವಿನ ಬಗ್ಗೆ ಆತನ ಬಾವ ಶಂಕರ ಬಾಣಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.