ಪ್ರೀತ್ಸೆ ಅಂತ ಬೆನ್ನುಬಿದ್ದವನ ಕಾಟಕ್ಕೆ ಬಲಿಯಾಯ್ತು ಯುವತಿ ಜೀವ

ಫೋನ್ ರಿಸೀವ್ ಮಾಡಲೇಬೇಕು ಎಂದು ತಾಕೀತು ಮಾಡಿ ನಿಂದಿಸಿದ್ದ ಯುವಕ; ಮನನೊಂದು ನೇಣಿಗೆ ಶರಣಾದ ಯುವತಿ

ಬೇಲೂರು: ಪ್ರೀತಿಸುವಂತೆ ತೊಂದರೆ ಕೊಡುತ್ತಿದ್ದುದಲ್ಲದೆ, ಸಾಯುವಂತೆ ಸಾರ್ವಜನಿಕರೆದುರು ಅವಮಾನ ಮಾಡಿದ ಯುವಕನ ಕಾಟದಿಂದ ಮನನೊಂದು ಯುವತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ನಿಡಗೂಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯಣ್ಣ ಎಂಬುವರ ಪುತ್ರಿ ಬಿಕಾಂ ಪದವೀಧರೆ ಸಂಗೀತಾ ಮೃತ ಯುವತಿ.

ಸಂಗೀತಾ ಬಿ.ಕಾಂ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದಳು. ಅದೇ ಗ್ರಾಮದ ಹೊನ್ನಯ್ಯ-ಚಂದ್ರಮ್ಮ ಎಂಬುವರ ಮಗ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೆ ನನಗೇ ಮದುವೆ ಮಾಡಿಕೊಡುವಂತೆ ಕೇಳಿದ್ದ.

ಆದರೆ ಸಂಗೀತಾ ಮನೆಯವರು ಈಗಲೇ ಮದುವೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಆದರೂ ಸಹ ಶಿವು, ಸಂಗೀತಾಳಿಗೆ ಪ್ರೀತಿಸು, ಪ್ರೀತಿಸು ಅಂತ ಆಗಾಗ ತೊಂದರೆ ಕೊಡುತ್ತಲೇ ಇದ್ದ.
ಜ.೧೧ ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಜಯಣ್ಣ ಅವರು ಮಗನ ಇರುಮುಡಿ ಕಾರ್ಯಕ್ರಮ ಸಂಬಂಧ ಸಂಗೀತಾಳೊಂದಿಗೆ ದೇವಸ್ಥಾನದ ಬಳಿ ನಿಂತಿದ್ದರು.

ಬೆಳಿಗ್ಗೆ 10 ಗಂಟೆಗೆ ಅಲ್ಲಿಗೆ ಬಂದ ಶಿವು, ಸಂಗೀತಾಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಾನು ಫೋನ್ ಮಾಡಿದರೂ ಏಕೆ ರಿಸೀವ್ ಮಾಡುವುದಿಲ್ಲ ಎಂದು ತಲೆಗೆ ಕೈಯಿಂದ ಹೊಡೆದಿದ್ದಾನೆ. ನಂತರ ನನ್ನನ್ನು ಪ್ರೀತಿ ಮಾಡುವುದಿಲ್ಲವೆಂದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಸಿದ್ದ, ಫೋನ್ ಮಾಡಿದಾಗ ರಿಸೀವ್ ಮಾಡಬೇಕು ಎಂದು ಎಚ್ಚರಿಕೆ‌ ನೀಡಿದ್ದ.

ನನ್ನನ್ನು ಮದುವೆಯಾಗಲಿಲ್ಲ ಎಂದರೆ ನೀನು ಸತ್ತುಹೋಗು ಎಂದು ಬೈಯ್ದು ಅವಮಾನ ಮಾಡಿದ್ದ. ಈ ನೋವಿನಿಂದ ಊರಿಗೆ ಬಂದ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಠಡಿಯ ಮರದ ಕಟ್ಟಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.

ಮಗಳು ಸಾಯುವಂತೆ ಪ್ರಚೋದನೆ ನೀಡಿ, ಸಾರ್ವಜನಿಕರೆದುರು ಅವಮಾನ ಮಾಡಿದ ಶಿವು ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ತಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.